ಗೆಳೆಯ ಅಥವಾ ಗೆಳತಿಯ ಜೊತೆಗೆ ಬ್ರೇಕಪ್ ಆದಾಗ ನೀವು ಅವರಿಂದ ಆದಷ್ಟು ದೂರವಿರಲು ಇಷ್ಟಪಡುತ್ತೀರಿ. ಇಬ್ಬರ ಮಧ್ಯೆ ನಡೆದ ಚಾಟ್ ಗಳು, ಮೊಬೈಲ್ ಮತ್ತು ವಾಟ್ಸಾಪ್ ಸಂದೇಶಗಳು, ಫೋಟೋಗಳು ಎಲ್ಲವನ್ನೂ ಡಿಲೀಟ್ ಮಾಡೋದು ಕೂಡ ಸಾಮಾನ್ಯ.
ಇದರಿಂದ ಮಾಜಿ ಪ್ರೇಮಿಯನ್ನು ಮರೆಯುವುದು ಸುಲಭ ಅನ್ನೋದು ಲೆಕ್ಕಾಚಾರ. ಆದ್ರೆ ಅನೇಕ ಬಾರಿ ಮಾಜಿಯ ಜೊತೆ ದಿನದ ಬಹುತೇಕ ಗಂಟೆಗಳನ್ನೇ ಕಳೆಯಬೇಕಾಗಿ ಬರಬಹುದು. ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಕೆಲವೊಂದು ಸರಳ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಕೆಲವೊಮ್ಮೆ ನೀವು ನಿಮ್ಮ ಮಾಜಿ ಪ್ರಿಯಕರ ಅಥವಾ ಪ್ರಿಯತಮೆ ಜೊತೆ ಒಂದೇ ಕಛೇರಿಯಲ್ಲಿ ಕೆಲಸ ಮಾಡಬೇಕಾಗಿ ಬರುತ್ತದೆ. ಆಗೆಲ್ಲ ನಿಮ್ಮ ಹಳೆಯ ಸಂಬಂಧದ ಬಗ್ಗೆ ಇತರರಿಗೆ ತಿಳಿದಿಲ್ಲದಿದ್ದರೆ, ಅದನ್ನು ರಹಸ್ಯವಾಗಿ ಉಳಿಯಲು ಬಿಡುವುದು ಉತ್ತಮ. ಉಳಿದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದರೆ, ಅದು ಅನಗತ್ಯವಾಗಿ ಗಾಸಿಪ್‌ನ ವಿಷಯವಾಗುತ್ತದೆ. ಹಳೆಯ ಸಂಬಂಧವು ಹೆಚ್ಚು ರಹಸ್ಯವಾಗಿ ಉಳಿಯುವುದೇ ಉತ್ತಮ.
ಆಫೀಸ್‌ನಲ್ಲಿ ನಿಮ್ಮ ಮಾಜಿ ಪ್ರೇಮಿಯನ್ನು ಎದುರಿಸಬೇಕಾದರೆ ಭಯದಿಂದ ಓಡಿಹೋಗಬೇಡಿ. ಆರಾಮಾಗಿ ಅವರೊಂದಿಗೆ ಸಹಜವಾಗಿರಿ. ಹಿಂದೆ ಏನೂ ನಡೆದೇ ಇಲ್ಲ ಎನ್ನುವಂತೆ ಇದ್ದರೆ ನಿಮ್ಮಲ್ಲೂ ಆತ್ಮವಿಶ್ವಾಸ ಹೆಚ್ಚುತ್ತದೆ. ಪರಸ್ಪರರ ಬಗ್ಗೆ ಕೆಲವೊಂದು ಖಾಸಗಿ ವಿಷಯಗಳು ತಿಳಿದಿರುತ್ತದೆ. ಆದರೆ ಹಳೆಯ ವಿಷಯಗಳನ್ನು ಎಂದಿಗೂ ಚರ್ಚಿಸಬೇಡಿ, ಈ ರೀತಿ ಮಾಡುವುದರಿಂದ ಇಬ್ಬರ ಹಳೆಯ ಗಾಯಗಳು ಮತ್ತೆ ಹಸಿರಾಗುತ್ತವೆ.
ಕೇವಲ ಸಹೋದ್ಯೋಗಿಗಳಂತಿರುವುದು ಬೆಸ್ಟ್. ಇಬ್ಬರೂ ಬೇರೆ ಬೇರೆ ಟೀಮ್ ಸೇರಿಕೊಳ್ಳಲು ಪ್ರಯತ್ನಿಸಿ. ಜೊತೆಯಾಗಿ ಕೆಲಸ ಮಾಡಬೇಕಾಗಿ ಬಂದರೆ ಹೆಚ್ಹೆಚ್ಚು ಮಾತನಾಡಬೇಕಾಗಿ ಬರುತ್ತದೆ. ಅನಗತ್ಯ ಮುಖಾಮುಖಿಯನ್ನು ತಪ್ಪಿಸಲು ಬೇರೆ ಬೇರೆಯಾಗಿಯೇ ಕೆಲಸ ಮಾಡುವುದು ಅನುಕೂಲಕರವಾಗಿರುತ್ತದೆ. ಮಾಜಿ ಪ್ರೇಮಿ ನಿಮ್ಮ ಬಗ್ಗೆ ಜೋಕ್ ಮಾಡಿದ್ರೆ, ಕಾಲೆಳೆಯಲು ಪ್ರಯತ್ನಿಸಿದ್ರೆ ಅವರನ್ನು ನೋಡಿ ನಗಬೇಡಿ. ಅಂತಹ ಜೋಕ್ ಗಳನ್ನು ನಿರ್ಲಕ್ಷಿಸುವುದು ಉತ್ತಮ. ಇಲ್ಲದೇ ಹೋದರೆ ಕೆಲವೊಂದು ವಿಚಾರಕ್ಕೆ ಕೋಪ ಬಂದು ಜಗಳವೂ ಆಗಬಹುದು.