ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಬಂಧಪಟ್ಟ ಟಾರ್ಗೆಟ್ ನೀಡುವುದು ಕಾಮನ್. ಟಾರ್ಗೆಟ್ ತಲುಪದೇ ಇದ್ದ ಉದ್ಯೋಗಿಗಳಿಗೆ ಸಂಬಳ ಕಡಿತ, ಇತರ ಬೋನಸ್‌ಗಳ ಕಡಿತ ಮಾಡೋದನ್ನೂ ನಾವು ಕೇಳಿದ್ದೇವೆ. ಇದೀಗ ಕಂಪನಿಯೊಂದು ಟಾರ್ಗೆಟ್ ತಲುಪದ ನೌಕರರಿಗೆ ವಿಚಿತ್ರ ಶಿಕ್ಷೆ ನೀಡಿದೆ. ಪರಸ್ಪರ ಕಪಾಳಮೋಕ್ಷ ಮಾಡುವಂತೆ ಸೂಚಿಸಿದೆ.
ಈ ನಿಯಮ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಂಗ್ ಕಾಂಗ್ ವಿಮಾ ಕಂಪನಿಯೊಂದು ನೀಡಿರುವ ವಿಲಕ್ಷಣ ಶಿಕ್ಷೆ ಇದು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಕಂಪನಿಯೇ ಈ ಆದೇಶವನ್ನು ರವಾನಿಸಿದೆ. ವಾರ್ಷಿಕ ಭೋಜನದ ಸಂದರ್ಭದಲ್ಲಿ ಕಳಪೆ ಕಾರ್ಯಕ್ಷಮತೆ ತೋರಿದ ನೌಕರರಿಗೆ ಪರಸ್ಪರ ಕಪಾಳಮೋಕ್ಷದ ಶಿಕ್ಷೆ ನೀಡಿದೆ.
ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ. ಕಂಪನಿಯ ಅಧಿಕಾರಿ ಸುಮಾರು ಹನ್ನೆರಡು ಉದ್ಯೋಗಿಗಳನ್ನು ವೇದಿಕೆಯ ಮೇಲೆ ನಿಲ್ಲಿಸಿ ಕಪಾಳಮೋಕ್ಷ ಮಾಡಿಸಿದ್ದಾರೆ. ಇವರೆಲ್ಲ ಟಾರ್ಗೆಟ್ ತಲುಪದ ನೌಕರರು. ಉದ್ಯೋಗಿಗಳಿಗೆ ಕಪಾಳಮೋಕ್ಷದ ಶಿಕ್ಷೆ ವಿಧಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ.