ಕೋಳಿ ಮೊಟ್ಟೆಗಳು ಬಿಳಿ ಮತ್ತು ಕಂದು ಎರಡು ಬಣ್ಣಗಳಲ್ಲಿ ಬರುತ್ತವೆ. ಎರಡೂ ಬಣ್ಣದ ಮೊಟ್ಟೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ನಮ್ಮ ಆರೋಗ್ಯಕ್ಕೆ ಯಾವ ಮೊಟ್ಟೆ ಸೂಕ್ತ? ಬಿಳಿ ಅಥವಾ ಕಂದು ಯಾವ ಮೊಟ್ಟೆ ಹೆಚ್ಚು ಪೌಷ್ಠಿಕವಾಗಿದೆ ಅನ್ನೋ ಗೊಂದಲ ಸಹಜ. ಎರಡೂ ಬಣ್ಣದ ಮೊಟ್ಟೆಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿಯೋಣ. ಮೊಟ್ಟೆಯ ಬಣ್ಣವು ಹೆಚ್ಚಾಗಿ ಕೋಳಿಯ ತಳಿ ಮತ್ತು ಕೋಳಿಯಿಂದ ಉತ್ಪತ್ತಿಯಾಗುವ ವರ್ಣದ್ರವ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಆಹಾರ, ಒತ್ತಡದ ಮಟ್ಟ ಮತ್ತು ಪರಿಸರದಂತಹ ಇತರ ಅಂಶಗಳು ಮೊಟ್ಟೆಯ ಬಣ್ಣಕ್ಕೆ ಕಾರಣವಾಗಬಹುದು.
ಆದರೆ ಕಂದು ಮತ್ತು ಬಿಳಿ ಬಣ್ಣದ ಮೊಟ್ಟೆಗಳ ನಡುವೆ ಪೌಷ್ಟಿಕಾಂಶದ ವ್ಯತ್ಯಾಸವಿಲ್ಲ. ಕೋಳಿ ಸೇವಿಸುವ ಆಹಾರ ಮತ್ತು ಪರಿಸರ ಅಂಶಗಳು ಮೊಟ್ಟೆಯ ಪೌಷ್ಟಿಕತೆಯ ಮೇಲೆ ಪರಿಣಾಮ ಬೀರಬಹುದು.ಒಂದು ದೊಡ್ಡ ಮೊಟ್ಟೆಯು ಸುಮಾರು 6.3 ಗ್ರಾಂ ಪ್ರೋಟೀನ್, 0.3 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 4.7 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಜೊತೆಗೆ ಒಂದು ಮೊಟ್ಟೆಯಲ್ಲಿ ಸುಮಾರು 0.8mg ಕಬ್ಬಿಣ, 0.6mg ಸತು, 15.4mg ಸೆಲೆನಿಯಮ್, 23.5mg ಫೋಲೇಟ್, 147mg ಕೋಲೀನ್, 0.4mcg ವಿಟಮಿನ್ B12 ಮತ್ತು 80mcg ವಿಟಮಿನ್ ಎ ಇರುತ್ತದೆ.
ಕಂದು ಮತ್ತು ಬಿಳಿ ಮೊಟ್ಟೆಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ
ಬಿಳಿ ಮತ್ತು ಕಂದು ಮೊಟ್ಟೆಗಳ ನಡುವೆ ಯಾವುದೇ ಪೌಷ್ಟಿಕಾಂಶದ ವ್ಯತ್ಯಾಸಗಳಿವೆಯೇ ಎಂದು ನಿರ್ಧರಿಸಲು ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ಶೆಲ್ ಬಣ್ಣವು ಮೊಟ್ಟೆಯ ಪ್ರಕಾರದ ಗುಣಮಟ್ಟ ಅಥವಾ ಪೌಷ್ಟಿಕಾಂಶದ ಪ್ರೊಫೈಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಮುಖ್ಯವಾಗಿ ಕಂಡುಬರುವ ವ್ಯತ್ಯಾಸವೆಂದರೆ ಚಿಪ್ಪಿನ ವರ್ಣದ್ರವ್ಯ ಮಾತ್ರ. ಒಂದು ನಿರ್ದಿಷ್ಟ ಬಣ್ಣದ ಮೊಟ್ಟೆಯು ಇನ್ನೊಂದಕ್ಕಿಂತ ಆರೋಗ್ಯಕರ ಅಥವಾ ರುಚಿಯಾಗಿರುತ್ತದೆ ಎಂದು ಅನೇಕರು ನಂಬಿದ್ದಾರೆ. ಆದರೆ ಎಲ್ಲಾ ರೀತಿಯ ಮೊಟ್ಟೆಗಳ ಪೌಷ್ಠಿಕಾಂಶ ಒಂದೇ ತೆರನಾಗಿರುತ್ತದೆ. ಹಾಗಾಗಿ ಎರಡೂ ಮೊಟ್ಟೆಗಳು ನಿಮಗೆ ಆರೋಗ್ಯಕರ ಆಯ್ಕೆಯಾಗಿವೆ.