1999ರಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಐಸಿ -814 ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದವರಲ್ಲಿ ಒಬ್ಬನಾದ ಮಿಸ್ತ್ರಿ ಜಹೂರ್ ಇಬ್ರಾಹಿಂನ್ನು ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಮೂಲಗಳ ಪ್ರಕಾರ, ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಕಳೆದ ಅನೇಕ ವರ್ಷಗಳಿಂದ ಜಾಹಿದ್ ಅಖುಂಡ್ ಎಂಬ ಸುಳ್ಳು ಗುರುತಿನ ಅಡಿಯಲ್ಲಿ ವಾಸಿಸುತ್ತಿದ್ದನು, ಮಾರ್ಚ್ 1ರಂದು ಕರಾಚಿಯ ಅಖ್ತರ್ ಕಾಲೋನಿಯಲ್ಲಿ ಅಪರಿಚಿತ ಬಂದೂಕುದಾರಿಗಳು ಈತನ ತಲೆಗೆ ಎರಡು ಬಾರಿ ಗುಂಡು ಹಾರಿಸಿದ್ದಾರೆ.
ಕಂದಹಾರ್ ಹೈಜಾಕ್ ಪ್ರಕರಣ ದೇಶ ಕಂಡ ಅತ್ಯಂತ ನಾಟಕೀಯ ಒತ್ತೆಯಾಳು ಬಿಕ್ಕಟ್ಟುಗಳಲ್ಲಿ ಒಂದಾಗಿದೆ. 1999ರ ಡಿಸೆಂಬರ್ 24ರಂದು ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಈ ವಿಮಾನದಲ್ಲಿ 179 ಮಂದಿ ಪ್ರಯಾಣಿಕರು ಹಾಗೂ 11 ಮಂದಿ ಸಿಬ್ಬಂದಿಯಿದ್ದರು.
ಆಗ ತಾಲಿಬಾನ್ ಆಡಳಿತವನ್ನು ಹೊಂದಿದ್ದ ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ವಿಮಾನವನ್ನು ಇಳಿಸಿಕೊಂಡಿದ್ದ ಉಗ್ರರು ಈ ಪ್ರಯಾಣಿಕರನ್ನು ಅಪಹರಿಸುವ ಮೂಲಕ ದೇಶದ ಜೈಲಿನಿಂದ ಮೂವರು ಕುಖ್ಯಾತ ಉಗ್ರರನ್ನು ರಿಲೀಸ್ ಮಾಡಿಸಿಕೊಂಡಿದ್ದರು. ಈ ಮೂವರ ಪೈಕಿ ಇಬ್ಬರು ಉಗ್ರರು ಇನ್ನೂ ಪಾಕ್ನಲ್ಲಿ ರಾಜಾರೋಷವಾಗಿ ಇದ್ದಾರೆ ಎನ್ನಲಾಗಿದೆ.