ಸಂಜೀವಿನಿ ಸೇವಿಸಿದರೆ ಯಾವುದೇ ಅನಾರೋಗ್ಯ ಕಾಡದು, ಮುಪ್ಪು ಬಾರದು, ಕೊನೆಗೆ ಸಾವೇ ಬಾರದು ಎಂಬುದನ್ನು ನಾವು ಕೇಳಿದ್ದೇವೆ. ಅಂತಹ ಸಂಜೀವಿನಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಂಜೀವಿನಿಯಂತೆ ಕಾರ್ಯನಿರ್ವಹಿಸಬಲ್ಲ ಹಲವು ಔಷಧೀಯ ಸಸ್ಯಗಳು, ಪುಷ್ಪಗಳು, ಗಿಡಮೂಲಿಕೆಗಳು ನಮ್ಮಲ್ಲಿವೆ. ಅಂಥ ಆಯುರ್ವೇದ ಐಶ್ವರ್ಯಗಳಲ್ಲಿ ದಾಸವಾಳವೂ ಪ್ರಮುಖವಾದದ್ದು.
ಮೂಲತಃ ಈ ದಾಸವಾಳ ಚೀನಾ ದೇಶದ್ದಾಗಿದ್ದರೂ ಭಾರತದ ಎಲ್ಲಾ ಭಾಗದಲ್ಲೂ ಆಲಂಕಾರಿಕ ಗಿಡವಾಗಿ ಇದನ್ನ ಬೆಳೆಸಲಾಗುತ್ತಿದೆ. ಚೀನಾ ಮತ್ತು ಫಿಲಿಪ್ಪೀನ್ಸ್ ಗಳಲ್ಲಿ ಈ ದಾಸವಾಳದ ತಾಜಾ ಹೂಗಳನ್ನು ಆಹಾರದಲ್ಲಿ ಬಳಸುತ್ತಾರೆ. ಹೂವಿನಿಂದ ಉಪ್ಪಿನಕಾಯಿಯನ್ನೂ ತಯಾರಿಸುತ್ತಾರೆ.
ಈ ದಾಸವಾಳದ ಎಲೆ, ಬೇರು, ಹೂ ಉಪಯುಕ್ತ ಭಾಗಗಳಾಗಿದ್ದು, ಅತ್ಯಂತ ಪರಿಣಾಮಕಾರಿ ಔಷಧೀಯ ಗುಣಗಳನ್ನು ಹೊಂದಿವೆ.
ಈ ದಾಸವಾಳದ ವಿವಿಧ ಉಪಯುಕ್ತ ಭಾಗಗಳಲ್ಲಿ ನೈಟ್ರೋಜನ್, ಕೊಬ್ಬು, ನಾರಿನಂಶ, ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ, ಥಯಮಿನ್, ರೈಬೋಫ್ಲೇವಿನ್ ಮತ್ತು ಆಸ್ಕಾರ್ಬಿಕ್ ಆಮ್ಲಗಳು ಇವೆ. ಔಷಧೀಯ ತಯಾರಿಕೆಯಲ್ಲಿ ಬಿಳಿ ದಾಸವಾಳ ಅತ್ಯಂತ ಶ್ರೇಷ್ಠವಾದದ್ದು.
ಈ ದಾಸವಾಳದ ಔಷಧೀಯ ಗುಣಗಳ ಬಗ್ಗೆ ಹೇಳುತ್ತಾ ಹೋದರೆ, ಅಧಿಕ ರಕ್ತಸ್ರಾವದಿಂದ ಬಳಲುವ ಸ್ತ್ರೀಯರು ದಾಸವಾಳದ ಹೂವಿನ ರಸವನ್ನು ಹಾಲಿನೊಡನೆ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಅನಿಯಮಿತ ಮುಟ್ಟು ಬಾಧೆ ನಿವಾರಣೆಯಲ್ಲೂ ಈ ಹೂವು ಪರಿಣಾಮಕಾರಿ.
ಬಿಳಿ ದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರೆಸಿ ಕುಡಿದರೆ ಉರಿಮೂತ್ರ ತೊಂದರೆ ಕಡಿಮೆಯಾಗುತ್ತೆ. ಜೊತೆಗೆ ಸುಟ್ಟಗಾಯ, ಆಮಶಂಕೆ ಭೇದಿಯಂತಹ ಸಂದರ್ಭದಲ್ಲೂ ಈ ದಾಸವಾಳ ಸಂಜೀವಿನಿಯಂತೆ ಕಾರ್ಯನಿರ್ವಹಿಸಬಲ್ಲದು.
ಮಧುಮೇಹದಿಂದ ಬಳಲುತ್ತಿರುವವರು ಬಿಳಿ ದಾಸವಾಳದ ಬೇರನ್ನು ನೀರಿನಲ್ಲಿ ಅರೆದು ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ನಾಲ್ಕು ಚಮಚದಷ್ಟು ಸೇವಿಸಿದರೆ ಸಮಸ್ಯೆ ನಿವಾರಣೆಯಾಗುತ್ತೆ ಎನ್ನುತ್ತದೆ ಆಯುರ್ವೇದ.
ಬಿಳಿ ದಾಸವಾಳದ ಬೇರು ಮತ್ತು ಹೂವನ್ನು ಮಜ್ಜಿಗೆಯಲ್ಲಿ ಅರೆದು ಅದಕ್ಕೆ ಒಂದಷ್ಟು ಮಜ್ಜಿಗೆ ಸೇರಿಸಿ ಕುಡಿದರೆ, ಮೂತ್ರನಾಳದಲ್ಲಿನ ಕಲ್ಲನ್ನೂ ಸಹ ತೆಗೆಯುವಂತಹ ಶಕ್ತಿ ಈ ದಾಸವಾಳಕ್ಕೆ ಇದೆ.
ಒಂದು ಭಾಗ ಬಿಳಿ ದಾಸವಾಳದ ಹೂವಿನ ರಸ, ಒಂದು ಭಾಗ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ತಯಾರಿಸಿಟ್ಟುಕೊಂಡು ಪ್ರತಿದಿನ ಕೂದಲಿಗೆ ಹಚ್ಚುತ್ತಿದ್ದರೆ, ಕೂದಲುದುರುವುದು ನಿಲ್ಲುವುದರ ಜೊತೆಗೆ ಕೂದಲು ಆರೋಗ್ಯಕರವಾಗಿಯೂ ಕಾಂತಿಯುಕ್ತವಾಗಿ ಕಾಣುತ್ತದೆ.