ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಔಷಧಿ ವ್ಯಾಪಾರಿ ಉಮೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಉಮೇಶ್ ಅಂತಿಮ ಸಂಸ್ಕಾರದ ವೇಳೆ ಹಾಜರಿದ್ದ ಎಂಬ ಮಾಹಿತಿ ಹೊರ ಬಿದ್ದಿದೆ.
ದುಷ್ಕರ್ಮಿಗಳ ಗುಂಪೊಂದು ಜೂನ್ 21 ರಂದು ಉಮೇಶ್ ಅವರನ್ನು ಭೀಕರವಾಗಿ ಹತ್ಯೆ ಮಾಡಿತ್ತು. ಈ ಪೈಕಿ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಶಂಕಿತ ಆರೋಪಿಗಳ ಪೈಕಿ ಯೂಸುಫ್ ಖಾನ್, ಉಮೇಶ್ ಕೊಲ್ಹೆಗೆ ಆಪ್ತನಾಗಿದ್ದ. ತನ್ನ ತಂದೆಯ ಅಂತ್ಯಸಂಸ್ಕಾರದ ವೇಳೆ ಈ ಯೂಸುಫ್ ಖಾನ್ ಸಹ ಭಾಗಿಯಾಗಿದ್ದ ಎಂದು ಕೊಲ್ಹೆಯ ಪುತ್ರ ಸಂಕೇತ್ ತಿಳಿಸಿದ್ದಾರೆ.
ಯೂಸುಫ್ ನಮಗೆ ದೈನಂದಿನ ಗ್ರಾಹಕನಾಗಿದ್ದ. 2006 ರಲ್ಲಿ ಆತ ಸಂಕಷ್ಟದಲ್ಲಿದ್ದಾಗ ನಮ್ಮ ತಂದೆ ಆತನಿಗೆ ಹಣಕಾಸು ನೆರವು ನೀಡಿದ್ದರು ಎಂದು ಹೇಳಿರುವ ಸಂಕೇತ್, ಇದಲ್ಲದೇ, ಯೂಸುಫ್ ತನ್ನ ಸಹೋದರಿಯರ ಮದುವೆಗೂ ನನ್ನ ತಂದೆಯಿಂದ ಹಣ ಪಡೆದಿದ್ದ. ಆತ ನನ್ನ ತಂದೆಯ ಅಂತ್ಯಸಂಸ್ಕಾರದ ವೇಳೆಯಲ್ಲೂ ಹಾಜರಿದ್ದ. ನನ್ನ ತಂದೆಯ ಕೊಲೆ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಈ ಪ್ರಕರಣದಲ್ಲಿ ಯೂಸುಫ್ ನ ಕೈವಾಡವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಪೊಲೀಸರು, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿರುವುದರಿಂದ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.