ಕೊರೊನಾ ವೈರಸ್ನ ಓಮಿಕ್ರಾನ್ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಜನತೆಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಓಮಿಕ್ರಾನ್ ಕೊರೊನಾ ವೈರಸ್ನ ಕೊನೆಯ ರೂಪಾಂತರಿಯಾಗಿದೆ ಹಾಗೂ ಕೊರೊನಾ ವೈರಸ್ ಓಮಿಕ್ರಾನ್ನೊಂದಿಗೆ ಕೊನೆಯಾಗುತ್ತದೆ ಎಂದು ಊಹಿಸುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ. ಓಮಿಕ್ರಾನ್ ಪ್ರಪಂಚದ 171 ದೇಶದಲ್ಲಿ ವರದಿಯಾದ ಬಳಿಕ ವಿಶ್ವ ಸಂಸ್ಥೆಯು ಈ ಹೇಳಿಕೆಯನ್ನು ನೀಡಿದೆ.
ಓಮಿಕ್ರಾನ್ ರೂಪಾಂತರಿಯು ಜಾಗತಿಕ ಮಟ್ಟದಲ್ಲಿ ಡೆಲ್ಟಾ ಜಾಗವನ್ನು ಆಕ್ರಮಿಸುತ್ತಿದೆ. ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ ಹರಡುವ ವೇಗವು ಅತ್ಯಂತ ಹೆಚ್ಚು. ಅಲ್ಲದೇ ಇದು ಡೆಲ್ಟಾ ರೂಪಾಂತರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಶ್ವಾಸನಾಳದ ಅಂಗಾಂಶಗಳಿಗೆ ಸೋಂಕು ಉಂಟು ಮಾಡುತ್ತದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಈ ನಡುವೆ, INSACOG ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ COVID-19 ನ ಓಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ ಮತ್ತು ಹೊಸ ಪ್ರಕರಣಗಳು ಅತೀವವಾಗಿ ಹೆಚ್ಚುತ್ತಿದ್ದು ಅದರಲ್ಲು ಬಹು ಮಹಾನಗರಗಳಲ್ಲಿ ಪ್ರಬಲವಾಗಿದೆ ಎಂದು ಹೇಳಿದೆ.
ಇನ್ನು ಓಮಿಕ್ರಾನ್ ರೂಪಾಂತರಿಯ ಉಪ ವಂಶಾವಳಿ BA.2 ಕೂಡ ವಿವಿಧ ದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತಿದೆ