ನವದೆಹಲಿ: ಮಹಾಮಾರಿಯ ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರದ ಮರು ಸೋಂಕಿನ ಪ್ರಮಾಣ ಮೂರರಷ್ಟು ಹೆಚ್ಚಿದೆ. ಹೀಗಾಗಿ ಆರೋಗ್ಯ ರಕ್ಷಣೆಯ ಸಾಮರ್ಥ್ಯ ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹೇರುವುದರ ಹೊರತಾಗಿಯೂ ಹೊಸ ರೂಪಾಂತರ ಓಮಿಕ್ರಾನ್ ಹರಡುವಿಕೆ ವೇಗ ಹೆಚ್ಚಾಗಲಿದೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುವ ಅಪಾಯದ ಮಟ್ಟಕ್ಕೆ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಒಂದೇ ದಿನ ದ್ವಿಗುಣವಾಯ್ತು ಒಮಿಕ್ರಾನ್ ಸೋಂಕಿತರ ಸಂಖ್ಯೆ: ದ. ಆಫ್ರಿಕಾದಲ್ಲಿ ಮೊದಲ ಹಂತದ ‘ಲಾಕ್ ಡೌನ್’ ಜಾರಿ
ಹೀಗಾಗಿ ಪ್ರತಿಯೊಂದು ರಾಷ್ಟ್ರವೂ ಓಮಿಕ್ರಾನ್ ವಿರುದ್ಧ ಹೋರಾಡುವುದಕ್ಕೆ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಹೀಗಾಗಿ ನಿಮ್ಮ ದೇಶಗಳಲ್ಲಿ ಪ್ರಜೆಗಳಿಗೆ ಸಂಪೂರ್ಣ ಲಸಿಕೆ ವಿತರಿಸುವತ್ತ ಹೆಚ್ಚು ಗಮನ ಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.
ದಕ್ಷಿಣ ಆಫ್ರಿಕನ್ ದೇಶಗಳಿಂದ ಪ್ರಯಾಣಿಸುವುದಕ್ಕೆ ನಿರ್ಬಂಧಿಸಿದರೂ ಯುಎಸ್ ನ ಐದು ರಾಜ್ಯಗಳಲ್ಲಿ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಆಸ್ಟ್ರೇಲಿಯಾದಲ್ಲಿ ಸಮುದಾಯದ ಮಟ್ಟದಲ್ಲಿ ಸೋಂಕು ಹರಡುತ್ತಿರುವುದು ವರದಿಯಾಗಿದೆ. ಭಾರತ, ಜಪಾನ್, ಮಲೇಷ್ಯಾ, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾದಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ರಾಷ್ಟ್ರಗಳು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.