ದೇಶದ ಕೊರೊನಾ ವೈರಸ್ ಸಲಹಾ ಸಮಿತಿಯನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಮಿತಿಯಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಕೋವಿಡ್ 19 ಕಾರ್ಯ ಗುಂಪಿನ ಅಧ್ಯಕ್ಷರಾದ ಡಾ. ಎಸ್.ಕೆ. ಅರೋರಾ ಓಮಿಕ್ರಾನ್ ರೂಪಾಂತರಿಯ ಕುರಿತಂತೆ ಶಾಕಿಂಗ್ ವಿಚಾರವೊಂದನ್ನು ತಿಳಿಸಿದ್ದಾರೆ.
ಕೊರೊನಾ ವೈರಸ್ ಓಮಿಕ್ರಾನ್ ರೂಪಾಂತರಿಯ ಮೂರ್ನಾಲ್ಕು ಉಪ ವಂಶಗಳಿವೆ. ರೋಗ ನಿರ್ಣಯದ ವಿಚಾರದಲ್ಲಿ ಈ ಉಪ ವಂಶಾವಳಿಗಳು ಭಿನ್ನವಾಗಿರಬಹುದು. ಆದರೆ ಸೋಂಕಿನ ನಡವಳಿಕೆ ಒಂದೇ ಆಗಿದೆ ಎಂದು ಅರೋರಾ ಹೇಳಿದ್ದಾರೆ.
ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಏರಿಕೆಯ ಬಗ್ಗೆ ಆತಂಕ ಹೊರ ಹಾಕಿದ ಅರೋರಾ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಕೋವಿಡ್ 19 ಸೋಂಕು ಇನ್ನಷ್ಟು ಹೆಚ್ಚಾಗಲಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ತೀವ್ರಗತಿಯ ಕೊರೊನಾ ಲಸಿಕಾ ಅಭಿಯಾನ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಅಲ್ಲದೇ ಕರ್ಫ್ಯೂಗಳಂತಹ ಆಡಳಿತಾತ್ಮಕ ನಿರ್ಧಾರಗಳೂ ಸಹ ಕೊರೊನಾವನ್ನು ತಡೆಯುವಲ್ಲಿ ಸಹಕಾರಿ ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಮಂಗಳವಾರ 1,68,063 ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.