ಕೋವಿಡ್ ಸಾಂಕ್ರಾಮಿಕ ಯಾವಾಗ ಕೊನೆಯಾಗುತ್ತೆ..? ಬಹುಶಃ ಇದೊಂದು ಪ್ರಶ್ನೆಗೆ ಉತ್ತರವನ್ನು ಇಡೀ ಮನು ಸಂಕುಲವೇ ಹುಡುಕುತ್ತಾ ಇರಬಹುದು. ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಸ್ ದಶಕಗಳವರೆಗೆ ಭೂಮಿಯ ಮೇಲೆ ಇದ್ದರೂ ಸಹ ಜನರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಿದಲ್ಲಿ ಕಡಿಮೆ ತೀವ್ರತೆಯ ರೂಪಾಂತರಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಈ ಮೂಲಕ ಸಾಂಕ್ರಾಮಿಕ ರೋಗವು ಒಂದು ಸಾಮಾನ್ಯ ಕಾಯಿಲೆಯಾಗಿ ಬದಲಾಗುತ್ತದೆ.
ಈ ನಡುವೆ ಕೆಲವು ಸಂಶೋಧಕರು ಓಮಿಕ್ರಾನ್ ರೂಪಾಂತರಿಯು ಕೋವಿಡ್ 19 ಸಾಂಕ್ರಾಮಿಕದ ಕೊನೆಯ ರೂಪಾಂತರಿಯಾಗಿದೆ ಎಂದು ವಾದಿಸುತ್ತಿದ್ದಾರೆ. ಓಮಿಕ್ರಾನ್ ರೂಪಾಂತರಿಯು ಹೆಚ್ಚಿನ ವೇಗದಲ್ಲಿ ಹರಡುತ್ತದೆ. ಈ ಹಿಂದಿನ ಪ್ರಬಲ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ತೀವ್ರತೆಯನ್ನು ಹೊಂದಿದೆ. ಆದರೆ ಇದರ ಪ್ರಸರಣದ ವೇಗವು ಹಲವಾರು ದೇಶಗಳಲ್ಲಿ ಅತ್ಯಂತ ಪ್ರಬಲ ರೂಪಾಂತರಿಯಾಗಿ ಮಾಡಿದೆ.
ಅಂದರೆ ಜನರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಸಧೃಡವಾಗುತ್ತಿದ್ದಂತೆಯೇ ಕೋವಿಡ್ ಸೋಂಕು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಕೊರೊನಾ ಲಸಿಕೆಗಳು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದೂ ಕೂಡ ಒಂದು ಪ್ರಮುಖ ಕಾರಣವಾಗಿದೆ.
ದಕ್ಷಿಣ ಆಫ್ರಿಕಾದ ಪ್ರಯೋಗಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ಸಂಶೋಧಕರು ಈ ಹಿಂದೆ ಡೆಲ್ಟಾ ರೂಪಾಂತರದಿಂದ ಸೋಂಕಿಗೆ ಒಳಗಾದವರು ಓಮಿಕ್ರಾನ್ ಸೋಂಕಿಗೆ ಒಳಗಾಗಬಹುದು. ಆದರೆ ಓಮಿಕ್ರಾನ್ ಸೋಂಕಿಗೆ ಒಳಗಾಗುವವರು ಡೆಲ್ಟಾ ಸೋಂಕಿಗೆ ಒಳಗಾಗುವುದಿಲ್ಲ ಎಂದು ತಿಳಿದುಬಂದಿದೆ.