ಓಮಿಕ್ರಾನ್ ರೂಪಾಂತರಿಯ ಹರಡುವಿಕೆಯು ಕೋವಿಡ್ ಸೋಂಕನ್ನು ಸ್ಥಳೀಯ ಕಾಯಿಲೆಯನ್ನಾಗಿ ಮಾಡುತ್ತಿದೆ. ಆದರೂ ಇದು ಸದ್ಯಕ್ಕೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿಯೇ ಉಳಿದಿದೆ ಎಂದು ಇಯುನ ಡ್ರಗ್ ವಾಚ್ಡಾಗ್ ಹೇಳಿದೆ. ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಜನತೆಗೆ ನಾಲ್ಕನೇ ಡೋಸ್ ಲಸಿಕೆ ನೀಡುವ ವಿಚಾರದಲ್ಲಿ ಸಂದೇಹ ವ್ಯಕ್ತಪಡಿಸಿದೆ. ಬೂಸ್ಟರ್ ಡೋಸ್ಗಳನ್ನು ಪುನರಾವರ್ತಿಸುವುದು ಕೊರೊನಾ ತಡೆಗಟ್ಟಲು ಸಮರ್ಥನೀಯ ತಂತ್ರವಲ್ಲ ಎಂದು ಹೇಳಿದೆ.
ಈ ವಿಚಾರವಾಗಿ ಮಾತನಾಡಿದ ಲಸಿಕೆ ಕಾರ್ಯತಂತ್ರದ ಮುಖ್ಯಸ್ಥ ಮಾರ್ಕೊ ಕ್ಯಾವೆಲರಿ ನಾವು ಸುರಂಗದ ಕೊನೆಗೆ ಯಾವಾಗ ಬರುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಕೊರೊನಾ ಲಸಿಕೆಗಳ ಪ್ರಭಾವ, ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳ, ಓಮಿಕ್ರಾನ್ ಸೇರಿದಂತೆ ಸಾಕಷ್ಟು ಕಾರಣಗಳಿಂದಾಗಿ ನಾವು ಕೊರೊನಾ ಒಂದು ಸ್ಥಳೀಯ ಕಾಯಿಲೆಯಾಗಿ ಮಾರ್ಪಡುವ ಪರಿಸ್ಥಿತಿಯನ್ನು ಸಮೀಪಿಸುತ್ತಿದ್ದೇವೆ ಎಂದು ಹೇಳಿದರು.
ಆದರೆ ಓಮಿಕ್ರಾನ್ ಸೋಂಕು ಹರಡುತ್ತಿರುವ ವೇಗ ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡುತ್ತಿದೆ. ನಾವು ಇನ್ನೂ ಸಾಂಕ್ರಾಮಿಕ ರೋಗದ ಜೊತೆಯಲ್ಲೇ ಇದ್ದೇವೆ ಎಂಬುದನ್ನು ಮರೆಯುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದರು.