ಓಮಿಕ್ರಾನ್ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಇದು ಸಾಮಾನ್ಯ ಜ್ವರದಂತಹ ಒಂದು ಸೌಮ್ಯವಾದ ಸೋಂಕನ್ನು ಮಾತ್ರ ಉಂಟು ಮಾಡುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಹೀಗಾಗಿ ಯಾರು ಕೂಡ ಕೊರೊನಾದ ಈ ಹೊಸ ರೂಪಾಂತರವು ಕೋವಿಡ್ ಮೂರನೇ ಅಲೆಗೆ ಕಾರಣವಾಗುತ್ತದೆ ಎಂದು ಭೀತಿಗೊಳಗಾಗಬೇಡಿ ಎಂದು ಹೇಳಿದರು.
ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತದೆ. ಆದರೆ ಅತ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ವೈರಸ್ ಈಗ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಇದೊಂದು ರೀತಿಯಲ್ಲಿ ಸಾಮಾನ್ಯ ಜ್ವರ ಇದ್ದಂತೆ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಓಮಿಕ್ರಾನ್ ರೂಪಾಂತರಿಯು ಡೆಲ್ಟಾದಷ್ಟು ಮಾರಣಾಂತಿಕವಾಗಿಲ್ಲ. ಓಮಿಕ್ರಾನ್ ಸೋಂಕಿಗೆ ಒಳಗಾದವರು ಕೇವಲ ನಾಲ್ಕೈದು ದಿನಗಳಲ್ಲೇ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಭೀಕರ ಪರಿಸ್ಥಿತಿಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿಯು ತಗುಲಿದ ವ್ಯಕ್ತಿ ಚೇತರಿಸಿಕೊಳ್ಳಲು 12 ರಿಂದ 25 ದಿನಗಳ ಸಮಯಾವಕಾಶ ಬೇಕಾಗುತ್ತಿತ್ತು. ಆದರೆ ಇದು ಓಮಿಕ್ರಾನ್ ಪ್ರಕರಣದಲ್ಲಿ ಕಾಣುತ್ತಿಲ್ಲ ಎಂದು ಯೋಗಿ ಹೇಳಿದರು.
ನವೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾದಾಗಿನಿಂದ ಇಲ್ಲಿಯವರೆಗೆ ಉತ್ತರ ಪ್ರದೇಶದಲ್ಲಿ ಎಂಟು ಮಂದಿ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ಅಂಕಿ ಅಂಶಗಳ ಪೈಕಿ ಇವರಲ್ಲಿ ನಾಲ್ಕು ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.