ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡು ಬಳಿಕ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಉದ್ಯೋಗ ಸ್ಥಳದಲ್ಲಿ ಅಲ್ಲಿನ ಮಹಿಳೆಯರ ಪರಿಸ್ಥಿತಿ ಶೋಚನಿಯವಾಗಿದ್ದು, ವಿದ್ಯಾರ್ಥಿನಿಯರು ಶಾಲಾ – ಕಾಲೇಜಿಗೆ ತೆರಳಲೂ ಸಹ ಹಲವಾರು ಕಟ್ಟುಪಾಡುಗಳಿವೆ.
ಇದರ ಮಧ್ಯೆ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಅಫ್ಘಾನಿಸ್ತಾನಕ್ಕೆ ತೆರಳಿದ ಬಳಿಕ ಅಲ್ಲಿಂದ ವಾಪಸ್ ಬರಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಯುವತಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿ ತಮ್ಮಗಳ ವ್ಯಾಸಂಗಕ್ಕೆ ನೆರವಾಗುವಂತೆ ಮೊರೆ ಇಟ್ಟಿದ್ದಾರೆ.
ಅಫ್ಘಾನಿಸ್ತಾನದ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಶುಕ್ರವಾರದಂದು ವಿಡಿಯೋ ಹರಿಬಿಟ್ಟಿದ್ದು, ನಾನು ಭಾರತದಲ್ಲಿ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾಳೆ. ಅಲ್ಲದೆ ನಾವುಗಳು ಭಾರತವನ್ನು ಪ್ರೀತಿಸುತ್ತೇವೆ. ಅದು ನಮ್ಮ ಕುಟುಂಬವಿದ್ದಂತೆ ಎಂದು ಫಾತಿಮಾ ಹೇಳಿಕೊಂಡಿದ್ದಾಳೆ.
ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ 5000 ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಈಗ ಅಲ್ಲಿಯೇ ಸಿಲುಕಿಕೊಂಡಿದ್ದು, ವಿದ್ಯಾಭ್ಯಾಸಕ್ಕಾಗಿ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ. ವೀಸಾ ಸಿಗದಿರುವುದೇ ಇದಕ್ಕೆ ಕಾರಣವಾಗಿದ್ದು, ಹೀಗಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ.