ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದು, ಸೋಮವಾರದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ವಿಚಾರಣೆಗೆ ಗೈರು ಹಾಜರಾಗಿದ್ದರೆ ರಾಹುಲ್ ಗಾಂಧಿ ಇಡಿ ಕಚೇರಿಗೆ ಬಂದಿದ್ದರು. ಆದರೆ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರು.
ಅದರಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆಗೆ ಮುಂದಾದ ವೇಳೆ ಅವರ ಬಂಧನಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಯತ್ನಿಸಿದ್ದರು. ಈ ವೇಳೆ ಅವರಿಂದ ಕೈಬಿಡಿಸಿಕೊಂಡು ಶ್ರೀನಿವಾಸ್ ಓಡಿಹೋಗಿದ್ದರು.
ಈ ವಿಡಿಯೋವನ್ನು ಶೇರ್ ಮಾಡಿದ್ದ ಬಿಜೆಪಿ ಕಾಂಗ್ರೆಸ್ಸಿನವರ ವೀರೋಚಿತ ಹೋರಾಟದ ಪರಿ ಇದು ಎಂದು ವ್ಯಂಗ್ಯವಾಡಿತ್ತು. ಈ ಕುರಿತು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದು, ನಾನು ಓಡಿಹೋಗಿದ್ದಲ್ಲ. ಬದಲಾಗಿ ಜವಾಬ್ದಾರಿ ಮೆರೆದಿದ್ದೇನೆ ಎಂದಿದ್ದಾರೆ.
ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ಬಂಧನಕ್ಕೆ ಯತ್ನಿಸಿದರೆ ನಮ್ಮ ಕಾರ್ಯ ಸಾಧಿಸಲು ಸಾಧ್ಯವೇ ಎಂದಿರುವ ಅವರು, ಅಲ್ಲಿಂದ ತಪ್ಪಿಸಿಕೊಂಡು ಹೋದ ಬಳಿಕ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಮಾಡಿ ಬಂಧನಕ್ಕೊಳಗಾಗಿದ್ದೇನೆ. ಬಂಧನಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.