ಈಗ ಎಲ್ಲರಿಗೂ ದೇಹ ತೂಕದ ಚಿಂತೆ. ಅಕ್ಕಿ ಉಪಯೋಗಿಸದೇ ಮಾಡುವ ಅಡುಗೆಯತ್ತ ಹೆಚ್ಚು ವಾಲುತ್ತಿದ್ದಾರೆ. ಹಾಗಾಗಿ ಇಲ್ಲಿ ಓಟ್ಸ್ ಬಳಸಿ ಮಾಡುವ ಪೊಂಗಲ್ ಇದೆ. ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಓಟ್ಸ್, ¼ ಕಪ್ – ಹೆಸರುಬೇಳೆ, ಉಪ್ಪು – ರುಚಿಗೆ ತಕ್ಕಷ್ಟು, ¾ ಕಪ್ – ನೀರು. ಇನ್ನು ಒಗ್ಗರಣೆಗೆ 1 ಟೀ ಸ್ಪೂನ್ – ಜೀರಿಗೆ ಪುಡಿ, ½ ಟೀ ಸ್ಪೂನ್ – ಕಾಳುಮೆಣಸಿನ ಪುಡಿ, ಚಿಕ್ಕ ತುಂಡು – ಶುಂಠಿ ತುರಿ, 6 – ಗೋಡಂಬಿ, 12 – ಕರಿಬೇವು ಎಲೆ, 2 ಟೀಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಂಡು ಅದನ್ನು ಸ್ವಲ್ಪ ಕೆಂಪಗಾಗುವವರೆಗೆ ಹುರಿದುಕೊಳ್ಳಿ.
ನಂತರ ಇದನ್ನು ಒಂದು ಕುಕ್ಕರ್ ಗೆ ಹಾಕಿ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಟೀ ಸ್ಪೂನ್ ಎಣ್ಣೆ ಹಾಕಿ.
ಜೀರಿಗೆ, ಶುಂಠಿ ತುರಿ, ಗೋಡಂಬಿ, ಕರಿಬೇವು, ಕಾಳುಮೆಣಸಿನ ಪುಡಿ ಸೇರಿಸಿ ಓಟ್ಸ್ ಸೇರಿಸಿ 3 ನಿಮಿಷಗಳ ಕಾಲ ಫ್ರೈ ಮಾಡಿ.
ಇದಕ್ಕೆ ½ ಕಪ್ ನೀರು ಸೇರಿಸಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಬೇಯಿಸಿದ ಬೇಳೆ, ಉಪ್ಪು 1.4 ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ ಚಟ್ನಿ ಜತೆ ಸವಿಯಿರಿ.