ಬ್ರಷ್ ಮಾಡುವಾಗ ಕೆಲವೊಮ್ಮೆ ಒಸಡುಗಳಲ್ಲಿ ರಕ್ತಸ್ರಾವವಾಗುತ್ತದೆ. ಅನೇಕ ಬಾರಿ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಒಸಡುಗಳ ರಕ್ತಸ್ರಾವವನ್ನು ತಡೆಯಲು ಕೆಲವು ಸುಲಭವಾದ ಮನೆಮದ್ದುಗಳನ್ನು ಮಾಡಬಹುದು.
ಒಸಡುಗಳ ರಕ್ತಸ್ರಾವದ ಹಿಂದೆ ಹಲವು ಕಾರಣಗಳಿರಬಹುದು. ತುಂಬಾ ಗಟ್ಟಿಯಾಗಿ ಹಲ್ಲುಜ್ಜುವುದು, ಆಂತರಿಕ ಸಮಸ್ಯೆಗಳು, ಗಾಯಗಳು ಹೀಗೆ ಅನೇಕ ಕಾರಣಗಳಿರುತ್ತವೆ. ಒಸಡುಗಳನ್ನು ಸರಿಯಾಗಿ ಶುಚಿಗೊಳಿಸದೇ ಇದ್ದರೆ ಕೆಲವೊಮ್ಮೆ ರಕ್ತವೂ ಹೊರಬರುತ್ತದೆ. ದಿನಕ್ಕೆ 2 ಬಾರಿ ಬ್ರಷ್ ಅಥವಾ ಫ್ಲೋಸ್ ಮಾಡಬೇಕು. ಫ್ಲೋಸ್ ಸಹಾಯದಿಂದ ಹಲ್ಲುಗಳ ನಡುವೆ ಸಿಲುಕಿರುವ ಆಹಾರದ ತುಂಡುಗಳನ್ನು ತೆಗೆದುಹಾಕಿ.
ಒಸಡುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಹಲ್ಲುಗಳ ಆರೋಗ್ಯವೂ ಚೆನ್ನಾಗಿರುತ್ತದೆ. ಬಾಯಿಯನ್ನು ಸ್ವಚ್ಛಗೊಳಿಸಲು ಬ್ರಷ್ ಮಾಡಿದರೆ ಸಾಲದು. ಹೈಡ್ರೋಜನ್ ಪೆರಾಕ್ಸೈಡ್ ಮೂಲಕ ಸ್ವಚ್ಛಗೊಳಿಸಬೇಕು. ಇದು ಒಸಡುಗಳಲ್ಲಿ ರಕ್ತಸ್ರಾವದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ ಅದನ್ನು ಅಪ್ಪಿತಪ್ಪಿಯೂ ನುಂಗಬೇಡಿ.
ಯುವಜನತೆಯಲ್ಲಿ ಸಿಗರೇಟ್, ಬೀಡಿ, ಹುಕ್ಕಾ ಸೇದುವ ಚಟ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಶ್ವಾಸಕೋಶ, ಹೃದಯದ ಮೇಲೆ ಮಾತ್ರವಲ್ಲ, ವಸಡಿನ ಮೇಲೂ ಆಗುತ್ತಿದೆ. ವಸಡುಗಳಲ್ಲಿ ರಕ್ತಸ್ರಾವವನ್ನು ನಿಲ್ಲಿಸಲು ಬಯಸಿದರೆ, ಈ ಕೆಟ್ಟ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸಿ.ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸಿದರೆ ಒಸಡುಗಳಲ್ಲಿ ರಕ್ತಸ್ರಾವವನ್ನು ನಿಲ್ಲಿಸುವುದು ಸುಲಭವಾಗುತ್ತದೆ. ದೈನಂದಿನ ಆಹಾರದಲ್ಲಿ ಕಿತ್ತಳೆ, ನಿಂಬೆಹಣ್ಣು, ಚೆರ್ರಿ ಮತ್ತು ಕ್ಯಾರೆಟ್‌ಗಳ ಸೇವನೆಯನ್ನು ಹೆಚ್ಚಿಸಬೇಕು.