ಅತ್ಯಂತ ಮುಜುಗರ ಹಾಗೂ ದುರಾದೃಷ್ಟಕರ ಘಟನೆಯೊಂದರಲ್ಲಿ ನಾರ್ವೆಯ ಸೈನ್ಯವು ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಒಂದು ಮಹತ್ವದ ನಿರ್ಧಾರ ಮಾಡಿರುವ ನಾರ್ವೆ ಸರ್ಕಾರವು ವಿಚಿತ್ರವಾದ ಘೋಷಣೆಯೊಂದನ್ನು ಮಾಡಿದೆ.
ದೇಶದಲ್ಲಿ ಮಿಲಿಟರಿ ಸೇವೆಗಳನ್ನು ಪೂರೈಕೆ ಮಾಡಿದ ಯುವ ಸೈನಿಕರಿಗೆ ತಮ್ಮ ಒಳ ಉಡುಪು ಹಾಗೂ ಸಾಕ್ಸ್ಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಲಾಗಿದೆ. ಕೊರೊನಾ ವೈರಸ್ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಈ ವಿಚಿತ್ರವಾದ ನಿರ್ಣಯ ಕೈಗೊಳ್ಳಲಾಗಿದೆ.
ನಾರ್ವೆ ಪ್ರತಿ ವರ್ಷವು ಸುಮಾರು 8000 ಯುವಕ ಹಾಗೂ ಯುವತಿಯರನ್ನು ಮಿಲಿಟರಿ ಸೇವೆಗೆ ಸೇರಿಸುತ್ತದೆ. ಈ ನೇಮಕಾತಿಗಳು NATO ದ ಉತ್ತರದ ಗಡಿ ಮತ್ತು ರಷ್ಯಾದ ಗಡಿಯನ್ನು ಕಾಪಾಡುವ ಜವಾಬ್ದಾರಿಯನ್ನು ವಹಿಸುತ್ತವೆ.
ಈ ವರ್ಷ, ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸರಬರಾಜಿಗೆ ತೀವ್ರ ಹೊಡೆತ ಬಿದ್ದಿರುವುದರಿಂದ ಸೇನೆಯು ತನ್ನ ದಾಸ್ತಾನುಗಳೊಂದಿಗೆ ಹೆಣಗಾಡುತ್ತಿದೆ. ಹೀಗಾಗಿ ನಾರ್ವೆಯು ಈಗಾಗಲೇ ಬಳಕೆ ಮಾಡಿದ ಒಳ ಉಡುಪು ಹಾಗೂ ಸಾಕ್ಸ್ಗಳನ್ನು ಮರು ಬಳಕೆ ಮಾಡಲು ನಿರ್ಧರಿಸಿದೆ. ಈ ಉಡುಪುಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ತೊಳೆದು ಸ್ವಚ್ಛಗೊಳಿಸಿ ಬಳಿಕ ಮರು ಬಳಕೆಗೆ ನೀಡಲಾಗುತ್ತದೆ ಎಂದು ಸೇನೆಯು ಹೇಳಿದೆ