ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ರಾಜ್ಯದಲ್ಲಿ ಒಳಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸೇವೆ ಕಾಯಂಗೊಳಿಸಲು ಸರ್ಕಾರ ಮುಂದಾಗಿದೆ. ನಿಯಮಾನಸಾರ ಪರಿಶೀಲಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆರೋಗ್ಯ ಇಲಾಖೆ ಆಯುಕ್ತರಿಗೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಒಳಗುತ್ತಿಗೆ ನೌಕರರ ಸಂಘ ಸರ್ಕಾರದ ಈ ಕ್ರಮ ಸ್ವಾಗತಿಸಿದ್ದು, ಶೀಘ್ರವೇ ಕ್ರಮ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ರಾಜ್ಯದಲ್ಲಿ 27,963 ಮಂದಿ ಒಳಗುತ್ತಿಗೆ ನೌಕರರಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಕಾಯಂಗಾಗಿ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಸೇವೆ ಕಾಯಂಗೆ ಸರ್ಕಾರ ಮುಂದಾಗಿದೆ. ವಿಳಂಬ ನೀತಿ ಅನುಸರಿಸದೇ ಆದಷ್ಟು ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಶಾವುರಾಜ್ ಮನವಿ ಮಾಡಿದ್ದಾರೆ.