ಅನ್ನದ ಜತೆ, ಚಪಾತಿ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಮಶ್ರೂಮ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇದೆ. ಇದು ರುಚಿಕರ ಹಾಗೂ ಥಟ್ಟಂತ ಆಗಿ ಬಿಡುತ್ತದೆ.
ಮಶ್ರೂಮ್ 1 ಪ್ಯಾಕ್ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 3 ಟೀ ಸ್ಪೂನ್ ಕಾಳುಮೆಣಸು, 1 ಟೀ ಸ್ಪೂನ್ ಜೀರಿಗೆ, 1 ಟೇಬಲ್ ಸ್ಪೂನ್ ಸೋಂಪು, 5 ಲವಂಗ, 1 ತುಂಡು ಚಕ್ಕೆ ಹಾಕಿ ಎಣ್ಣೆ ಸೇರಿಸದೆ ಫ್ರೈ ಮಾಡಿ. ನಂತರ ಇದು ಪರಿಮಳ ಬರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ.
ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಸೇರಿಸಿ ಅದು ಬಿಸಿಯಾಗುತ್ತಲೇ ಸಾಸಿವೆ 1 ಟೀ ಸ್ಪೂನ್ ಹಾಕಿ ನಂತರ 2 ಈರುಳ್ಳಿ ಕತ್ತರಿಸಿಹಾಕಿ. ಈರುಳ್ಳಿ ಕೆಂಪಾಗುತ್ತಿದ್ದಂತೆ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷಗಳ ಕಾಲ ಫ್ರೈ ಮಾಡಿ ನಂತರ ಮಶ್ರೂಮ್ ಅನ್ನು ಕತ್ತರಿಸಿಕೊಂಡು ಹಾಕಿ ಮಿಕ್ಸ್ ಮಾಡಿ. ಮಶ್ರೂಮ್ ನೀರು ಬಿಡುತ್ತಿದ್ದಂತೆ ಅದಕ್ಕೆ ಮಾಡಿಟ್ಟುಕೊಂಡ ಪುಡಿ ಸೇರಿಸಿ ಮಿಕ್ಸ್ ಮಾಡಿ ಉಪ್ಪು ಹಾಕಿ 5 ನಿಮಿಷಗಳ ಕಾಲ ಮುಚ್ಚಿ. ನಂತರ ಇದಕ್ಕೆ ಸ್ವಲ್ಪ ಕರಿಬೇವು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಬೇಯಿಸಿಕೊಳ್ಳಿ. ಮಶ್ರೂಮ್ ಅನ್ನು ಚೆನ್ನಾಗಿ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.