ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ತವರು ಎಂದೇ ಗುರುತಿಸಿಕೊಂಡಿದೆ. ಈ ಮಾತಿಗೆ ಪುಷ್ಟಿಯೆಂಬಂತೆ ಹೆಜ್ಜೆಗೊಂದರಂತೆ ದೇವಾಲಯಗಳು ಜಿಲ್ಲೆಯಲ್ಲಿ ಕಂಡುಬರುತ್ತಿವೆ. ಇಂತಹ ದೇವಾಲಯಗಳ ಪೈಕಿ ನಗರದ ಪಾಂಡೇಶ್ವರದಲ್ಲಿ ವಿರಾಜಮಾನವಾಗಿ ಬೆಳಗುತ್ತಿದೆ ಮಂಗಳೂರಿನ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
ಈ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ ತನ್ನ ದಿವ್ಯ ಸಾನಿಧ್ಯದ ಮೂಲಕ ಸಕಲ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭಕ್ತರ ಪಾಲಿನ ಸಕಲ ಸಂಕಷ್ಟಗಳನ್ನೂ ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸುತ್ತಿದೆ. ಸಕಲ ಭಕ್ತಾದಿಗಳ ಆರಾಧನಾ ತಾಣವಾಗಿ ಇದು ಕಂಗೊಳಿಸುತ್ತಿದೆ. ನಗರ ಭಾಗದಲ್ಲೇ ಇರುವ ಈ ಅಪರೂಪದ ದೇವಾಲಯ ಸಕಲ ಭಕ್ತಾದಿಗಳ ಆಕರ್ಷಣೆಯ ಕೇಂದ್ರವಾಗಿ ರೂಪುಗೊಂಡಿದೆ.
ಪೌರಾಣಿಕ ವಿಶೇಷ ಮಹಾತ್ಮೆಯಿರುವ ಈ ಕ್ಷೇತ್ರ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟು ಪಾಂಡೇಶ್ವರ ಎಂಬ ಪ್ರತೀತಿಗೆ ಬಂತು ಎಂದು ಹೇಳಲಾಗುತ್ತೆ. ಕಿರಾತಾರ್ಜುನೀಯದ ಈಶ್ವರನ ಸಾನಿಧ್ಯವೇ ಇಲ್ಲಿಯ ಮೂಲ ಸಾನಿಧ್ಯದ ಕಲ್ಪನೆಯಾಗಿರುತ್ತದೆ. ಇಲ್ಲಿ ಮಹಾಲಿಂಗೇಶ್ವರ ದೇವರೆ ಪ್ರಧಾನ ದೇವರಾಗಿ ಆರಾಧಿಸಿಕೊಂಡು ಬರುತ್ತಿದ್ದರೆ, ವೈಷ್ಮವೀ ದೇವಿ ಹಾಗೂ ವಿಷ್ಣುಮೂರ್ತಿ, ಗಣಪತಿ ದೇವರು ಸಪರಿವಾರ ದೇವರಾಗಿ ಆರಾಧನೆ ಮಾಡಲಾಗುತ್ತಿದೆ. ನಾಗನ ಸಾನಿಧ್ಯದ ಜೊತೆ ದೈವಗಳ ಸಾನಿಧ್ಯವೂ ಇಲ್ಲಿದೆ.
ಈ ದೇವಾಲಯದಲ್ಲಿ ಪುರಾತನವಾದ ಈಶ್ವರ ಲಿಂಗವೇ ಇದ್ದು, ರುದ್ರಾಭಿಷೇಕ ಮತ್ತು ಮೃತ್ಯುಂಜಯ ಜಪ ಸೇವೆ ಇಲ್ಲಿನ ಪ್ರಮುಖ ಸೇವೆಯಾಗಿದೆ. ಮಾರಕ ಕಾಯಿಲೆಯಾದ ಕ್ಯಾನ್ಸರ್‌ನಿಂದ ಮುಕ್ತಿಗಾಗಿ ಅದೆಷ್ಟೋ ಜನ ಇಲ್ಲಿಗೆ ಬಂದು ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಮಾಡಿ ಒಳಿತನ್ನು ಕಂಡಿದ್ದಾರೆ. ಕ್ಯಾನ್ಸರ್ ರೋಗ ಗೆದ್ದಿದ್ದಾರೆ.
ಒಟ್ಟಿನಲ್ಲಿ ನಂಬಿದವರ ಅಭೀಷ್ಠೆಗಳನ್ನು ನೆರವೇರಿಸುವ ಮಹಿಮಾನ್ವಿತ ಶಕ್ತಿ ಇಲ್ಲಿದೆ. ಅದೇ ಕಾರಣಕ್ಕಾಗಿ ಸಾಕಷ್ಟು ಭಕ್ತರೂ ಇಲ್ಲಿಗೆ ಬರುತ್ತಾರೆ. ಕ್ಷೇತ್ರದ ಶಕ್ತಿಯನ್ನು ಕಂಡು ಬೆರಗಾಗಿದ್ದಾರೆ. ಒಳಿತನ್ನು ಕಂಡಿದ್ದಾರೆ.