ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿ ಅಲ್ಟ್ರಾವೈಲೆಟ್ ಆಟೋಮೋಟಿವ್ ಇತ್ತೀಚೆಗೆ ಭಾರತದಲ್ಲಿ ತನ್ನ ಸ್ಪೋರ್ಟ್ಸ್ ಎಲೆಕ್ಟ್ರಿಕ್ ಬೈಕ್, ಅಲ್ಟ್ರಾವೈಲೆಟ್ ಎಫ್77 ಅನ್ನು ಪರಿಚಯಿಸಿದೆ. ಇದು ದೇಶದ ಅತಿ ವೇಗದ ಎಲೆಕ್ಟ್ರಿಕ್ ಬೈಕ್ ಅನ್ನೋದು ವಿಶೇಷ. ಕೇವಲ 7.8 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಇದು ಪಡೆಯಬಲ್ಲದು. ಬೈಕಿನ ಬೆಲೆ 3.8 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿ 4.55 ಲಕ್ಷದವರೆಗಿದೆ.
ಕಂಪನಿಯು ತನ್ನ ಎಲೆಕ್ಟ್ರಿಕ್ ಬೈಕ್‌ನ ಸೀಮಿತ ಆವೃತ್ತಿಯನ್ನು ಸಹ ಪರಿಚಯಿಸಿದೆ. ವಿಶೇಷ ಅಂದ್ರೆ ಈ ಸೀಮಿತ ಆವೃತ್ತಿ ಬೈಕ್‌ಗಳು ಲಾಂಚ್ ಆಗಿ ಕೇವಲ 2 ಗಂಟೆಯೊಳಗೆ ಸೋಲ್ಡ್ ಔಟ್ ಆಗಿವೆ. ಅಲ್ಟ್ರಾವೈಲೆಟ್ F77 ಸೀಮಿತ ಆವೃತ್ತಿಯ 77 ಘಟಕಗಳನ್ನು ಮಾತ್ರ ಕಂಪನಿ ಉತ್ಪಾದಿಸಿತ್ತು. ಇದಕ್ಕೆ ಸಾಮಾನ್ಯ ಮಾದರಿಯಿಂದ ಸಂಖ್ಯೆ ಮತ್ತು ವಿಶೇಷ ಬಣ್ಣವನ್ನು ನೀಡಿರೋದು ವಿಶೇಷ. ಇದರ ಪವರ್ ಕೂಡ ಪ್ರಮಾಣಿತ ಮಾದರಿಗಿಂತ ಹೆಚ್ಚು.
ಸೀಮಿತ ಆವೃತ್ತಿಯ ಮೋಟಾರ್ ಸೈಕಲ್ 40.2 bhp ಮತ್ತು 100 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾದರಿಯ ಗರಿಷ್ಠ ವೇಗ ಗಂಟೆಗೆ 152 ಕಿಮೀ. ಸ್ಟ್ಯಾಂಡರ್ಡ್ ಮಾದರಿಯ ಗರಿಷ್ಠ ವೇಗ ಕೇವಲ 147 ಕಿಮೀ. ಬೈಕ್‌ನ ಉಳಿದ ಫೀಚರ್‌ಗಳು ಮತ್ತು ಹಾರ್ಡ್‌ವೇರ್ ಬದಲಾಗಿಲ್ಲ. ಬೈಕ್‌ನ ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಅಳವಡಿಸಲಾಗಿದೆ. 320 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 230 ಎಂಎಂ ಡಿಸ್ಕ್ ಬ್ರೇಕ್ ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಲಭ್ಯವಿದೆ.
ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್, 5 ಇಂಚಿನ ಟಿಎಫ್‌ಟಿ ಸ್ಕ್ರೀನ್, ವೆಹಿಕಲ್ ಲೊಕೇಟರ್, ಲಾಕ್‌ಡೌನ್, ರೈಡ್ ಅನಾಲಿಟಿಕ್ಸ್, ಕ್ರ್ಯಾಶ್ ಡಿಟೆಕ್ಷನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ – ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್.10.3 kWh ಬ್ಯಾಟರಿ ಪ್ಯಾಕ್ ಅನ್ನು F77 ಲಿಮಿಟೆಡ್ ಆವೃತ್ತಿಯಲ್ಲಿ ನೀಡಲಾಗಿದೆ. ಇದು ಒಂದೇ ಚಾರ್ಜ್‌ನಲ್ಲಿ 306 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಎಸಿ ಚಾರ್ಜರ್ ಮೂಲಕ ಸುಮಾರು 7-8 ಗಂಟೆಗಳಲ್ಲಿ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದರಲ್ಲಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಇದೆ. F77 ಬೈಕ್‌ನ ವಿತರಣೆ 2023 ಜನವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.