
ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿ ಸಿಂಪಲ್ ಒನ್, ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 1.45 ಲಕ್ಷ ರೂಪಾಯಿ. ಕಂಪನಿ ಈ ಸ್ಕೂಟರ್ ಬಿಡುಗಡೆ ಮಾಡಲು 1.5 ವರ್ಷಗಳನ್ನೇ ತೆಗೆದುಕೊಂಡಿದೆ.
ಭಾರತದಲ್ಲಿ ಆಗಸ್ಟ್ 15, 2021 ರಂದೇ ಇದನ್ನು ಪರಿಚಯಿಸಲಾಯಿತು. ನಂತರ ಕಂಪನಿ ಸ್ಕೂಟರ್ ಅನ್ನು ಹಲವಾರು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಇನ್ನಷ್ಟು ಫೀಚರ್‌ಗಳನ್ನು ಅಳವಡಿಸಿದೆ. ವಿಶೇಷವೆಂದರೆ ಇದುವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಈ ಸ್ಕೂಟರ್‌ಗಾಗಿ ಬುಕ್ಕಿಂಗ್ ಮಾಡಿದ್ದಾರೆ.
ಮೊದಲೇ ಕಾಯ್ದಿರಿಸಲಾದ ಸ್ಕೂಟರ್‌ಗಳನ್ನು ಜೂನ್ 6 ರಿಂದ ಹಂತಹಂತವಾಗಿ ವಿತರಿಸಲು ಸಿಂಪಲ್ ಎನರ್ಜಿ ಮುಂದಾಗಿದೆ. ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಡ್ಯುಯಲ್-ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಇದರ ಸಾಮರ್ಥ್ಯವು 5kWh ಆಗಿದ್ದು ಇದು ಒಂದೇ ಚಾರ್ಜ್‌ನಲ್ಲಿ 212 ಕಿಮೀ ವ್ಯಾಪ್ತಿ ನೀಡುತ್ತದೆ. ಬ್ಯಾಟರಿ ಪ್ಯಾಕ್ ಅನ್ನು ಮನೆಯಲ್ಲಿಯೇ ಸೊನ್ನೆಯಿಂದ 80 ಪ್ರತಿಶತದವರೆಗೆ 5 ಗಂಟೆ 54 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಮನೆಗೇ ಅಳವಡಿಸಬಹುದಾದಂತಹ ಪೋರ್ಟಬಲ್ 750W ಫಾಸ್ಟ್ ಚಾರ್ಜರ್ ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು, ಇದರ ಬೆಲೆ 13,000 ರೂಪಾಯಿ.
ಸಿಂಪಲ್ ಎನರ್ಜಿ ಆಗಸ್ಟ್‌ನಲ್ಲಿ ತನ್ನದೇ ಆದ ಸ್ಪೀಡ್ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಪ್ರಾರಂಭಿಸಲಿದೆ. ಇದರ ಮೂಲಕ, ಸ್ಕೂಟರ್ 0-80 ಪ್ರತಿಶತದಿಂದ 1.5 ಕಿಮೀ / ನಿಮಿಷದ ದರದಲ್ಲಿ ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ ಗರಿಷ್ಠ 11.39bhp (8.5kW) ಮತ್ತು 72Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಲ್ಟಿಪಲ್ ರೈಡಿಂಗ್ ಮೋಡ್‌ಗಳು ಇದರಲ್ಲಿವೆ. ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಅನ್ನು ಸಿಂಪಲ್ ಒನ್‌ನಲ್ಲಿ ನೀಡಲಾಗಿದೆ. ಸೋನಿಕ್ ಮೋಡ್‌ನಲ್ಲಿ, ಸಿಂಪಲ್ ಒನ್ ಸ್ಕೂಟರ್ 2.77 ಸೆಕೆಂಡ್‌ಗಳಲ್ಲಿ 0-40 ಕಿಮೀ ವೇಗವನ್ನು ಪಡೆಯುತ್ತದೆ. 7- ಟಚ್‌ಸ್ಕ್ರೀನ್ ಇಂಟರ್ಫೇಸ್ ಇದರಲ್ಲಿದೆ.