ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಸರದಾರರು ಸಾಕಷ್ಟಿದ್ದಾರೆ. ಸಾವಿರಗಟ್ಟಲೆ ರನ್ ಹಾಗೂ ನೂರು ಶತಕ ಪೇರಿಸಿದವರ ಬಗ್ಗೆಯೂ ನೀವು ಕೇಳಿರಬಹುದು. ಆದ್ರೆ ವೃತ್ತಿ ಬದುಕಿನಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದೇ ಇರುವವರು ಬಹಳ ವಿರಳ. ಇಂತಹ ಕೆಲವೇ ಕೆಲವು ಅದೃಷ್ಟಶಾಲಿಗಳಲ್ಲಿ ಓರ್ವ ಭಾರತೀಯ ಬ್ಯಾಟ್ಸ್‌ಮನ್ ಕೂಡ ಇದ್ದಾರೆ. ಅವರೇ ಯಶ್ಪಾಲ್ ಶರ್ಮಾ. ದೇಶಕ್ಕಾಗಿ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ ಟೀಂ ಇಂಡಿಯಾದ ಈ ಹೀರೋ ಒಮ್ಮೆಯೂ ಡಕೌಟ್ ಆಗಲೇ ಇಲ್ಲ.
ಯಶ್ಪಾಲ್ ಶರ್ಮಾ 42 ಏಕದಿನ ಪಂದ್ಯಗಳನ್ನಾಡಿ 883 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧ ಶತಕಗಳೂ ಸೇರಿವೆ. ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 89 ರನ್. ಏಕದಿನ ಪಂದ್ಯಗಳಲ್ಲಿ ಒಮ್ಮೆಯೂ ಇವರು ಶೂನ್ಯಕ್ಕೆ ಔಟಾಗಿರಲಿಲ್ಲ. ಯಶ್ಪಾಲ್ ಶರ್ಮಾ ಭಾರತ ತಂಡದಲ್ಲಿ ಆಡುತ್ತಿದ್ದ ಸಮಯದಲ್ಲಿ ವೆಸ್ಟ್ ಇಂಡೀಸ್ ತಂಡದ ಬೌಲರ್‌ಗಳು ಅತ್ಯಂತ ಅಪಾಯಕಾರಿಯಾಗಿದ್ದರು. ಅವರನ್ನು ಎದುರಿಸಿ ರನ್ ಮಾಡೋದು ಸುಲಭವಾಗಿರಲಿಲ್ಲ.
ಆದ್ರೂ ಯಶ್ಪಾಲ್ ಒಮ್ಮೆಯೂ ಸೊನ್ನೆ ಸುತ್ತದೇ ಸಾಧನೆ ಮಾಡಿದ್ದರು. ಕಳೆದ ವರ್ಷ ಜುಲೈನಲ್ಲಿ ಯಶ್ಪಾಲ್ ಶರ್ಮಾ ಮೃತಪಟ್ಟಿದ್ದಾರೆ. ಒಮ್ಮೆಯೂ ಶೂನ್ಯಕ್ಕೆ ಔಟಾಗದ ಇತರ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾದ ಪೀಟರ್ ಕ್ರಿಸ್ಟನ್ ಕೂಡ ಒಬ್ಬರು. ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಿದರೂ ಎಂದಿಗೂ ಡಕ್‌ಗೆ ಔಟಾಗಲಿಲ್ಲ. ದಕ್ಷಿಣ ಆಫ್ರಿಕಾದ ಕೆಪ್ಲರ್ ವೆಸೆಲ್ಸ್ ಕೂಡ ಈ ದಾಖಲೆಗೆ ಪಾತ್ರರಾಗಿದ್ದಾರೆ.
ಈ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡರಲ್ಲೂ ಆಡಿದ್ದಾರೆ. ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ 109 ODI ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 1 ಶತಕ ಮತ್ತು 26 ಅರ್ಧ ಶತಕಗಳ ಸಹಾಯದಿಂದ 3367 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 107 ರನ್.
ವೆಸೆಲ್ಸ್ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿಲ್ಲ. ದಕ್ಷಿಣ ಆಫ್ರಿಕಾದವರೇ ಆದ ಜಾಕಸ್ ರೋಡಾಲ್ಫ್ ಕೂಡ ಶೂನ್ಯಕ್ಕೆ ಔಟಾಗದವರ ಪಟ್ಟಿಯಲ್ಲಿದ್ದಾರೆ. 45 ಏಕದಿನ ಪಂದ್ಯಗಳಲ್ಲಿ ಆಡಿ ಇವರು 1174 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕಗಳು ಸಹ ಸೇರಿವೆ.