ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಭಾರತವೂ ಸಹ ಕೊರೊನಾದಿಂದ ತತ್ತರಿಸಿ ಹೋಗಿದ್ದು, ಮೊದಲನೆ ಅಲೆ ಸಂದರ್ಭದಲ್ಲಿ ಲಾಕ್ಡೌನ್ ಸಂಕಷ್ಟಕ್ಕೀಡು ಮಾಡಿದ್ದರೆ, ಎರಡನೇ ಅಲೆ ಸಂದರ್ಭದಲ್ಲಿ ವ್ಯಾಪಕ ಸಾವು – ನೋವುಗಳು ಸಂಭವಿಸಿತ್ತು.
ಇದೀಗ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ರೂಪಾಂತರಿ ವೈರಸ್ ಒಮಿಕ್ರೋನ್ ವಿಶ್ವವನ್ನು ಕಾಡಲಾರಂಭಿಸಿದ್ದು, ಭಾರತಕ್ಕೂ ಕಾಲಿಟ್ಟಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಒಮಿಕ್ರೋನ್ ನಿಂದಲೇ ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ಎಚ್ಚರಿಕೆ ನೀಡಿದೆ.
ತಜ್ಞರು ಸಹ ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ಮಧ್ಯಭಾಗದ ವೇಳೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಲಕ್ಷಾಂತರ ದಾಟಬಹುದು ಎಂದು ತಿಳಿಸಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಮಾಸ್ಕ್ ಧಾರಣೆ ಮಾಡುವುದು ಅತಿ ಮುಖ್ಯ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೂ ಸಹ ಕೊರೊನಾ ಮಾರ್ಗಸೂಚಿಗಳನ್ನು ಯಾವುದೇ ಲೋಪವಾಗದಂತೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಸಂದೇಶ ರವಾನಿಸಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆಗಳ ಕುರಿತು ನಿಗಾ ಇಡುವಂತೆ ಸೂಚಿಸಿದೆ.