ಬೆಂಗಳೂರು: ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ತೀವ್ರತೆ ಕಡಿಮೆಯಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಒಮಿಕ್ರಾನ್ ಸೋಂಕಿತ ವೈದ್ಯ ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ನ.22ರಂದು ವೈದ್ಯನಿಗೆ ಸೋಂಕು ದೃಢಪಟ್ಟಿತ್ತು. ಸೋಂಕು ಪತ್ತೆಯಾಗಿ ಇಂದಿಗೆ 14 ದಿನಗಳಾಗಿತ್ತು. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕೂಡ ಮಾಡಲಾಗಿದೆ. ವರದಿಯಲ್ಲಿ ನೆಗೆಟಿವ್ ಬಂದರೆ ವೈದ್ಯನನ್ನು ಇಂದು ಡಿಸ್ಚಾರ್ಜ್ ಮಾಡಲಾಗುತ್ತದೆ. ಡಿಸ್ಚಾರ್ಜ್ ಆದರೂ ಕೂಡ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಬೇಕು ಎಂದರು.
ಮೊದಲ ಡೇಟಿಂಗ್ ನಲ್ಲಿ ನಡೆಯಿತು ಇಂಥ ಯಡವಟ್ಟು…..!
ರೂಪಾಂತರಿ ಒಮಿಕ್ರಾನ್ ವೈರಸ್ ತೀವ್ರತೆ ಇಲ್ಲ. ಆದರೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಯಾವತ್ತೂ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿರುತ್ತದೆ. ನಂತರ ಬರುವ ಅಲೆಗಳು ಅಷ್ಟೊಂದು ತೀವ್ರವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ವೈರಸ್ ಸಾಯುತ್ತದೆ. ಹಾಗಂತ ನಿರ್ಲಕ್ಷ್ಯ ಬೇಡ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.