ನವದೆಹಲಿ: ಮಹಿಳೆ ಸ್ವ ಇಚ್ಛೆಯಿಂದ ವ್ಯಕ್ತಿಯೊಂದಿಗೆ ಒಪ್ಪಿತ ಜೀವನ ನಡೆಸಿ ಸಂಬಂಧ ಮುರಿದುಬಿದ್ದರೆ ಅದು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣವೊಂದರಲ್ಲಿ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪಿನ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದ್ದು, ಮಹಿಳೆ ಸ್ವ ಇಚ್ಛೆಯಿಂದ ವ್ಯಕ್ತಿಯೊಂದಿಗೆ ಸಂಬಂಧವಿಟ್ಟುಕೊಂಡು ಆತನೊಂದಿಗೆ ಒಪ್ಪಿತ ಜೀವನ ನಡೆಸಿ, ಬಳಿಕ ಸಂಬಂಧ ಮುರಿದು ಬಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.
ಅನ್ಸಾರ್ ಮೊಹಮ್ಮದ್ ಎಂಬುವವರು ತಮ್ಮ ವಿರುದ್ಧ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, ದೂರುದಾರ ಮಹಿಳೆ 21 ವರ್ಷದವಳಾಗಿದ್ದಾಗ ಅನ್ಸಾರ್ ಎಂಬಾತನ ಜತೆ ಸಂಬಂಧ ಹೊಂದಿದ್ದರು ಎಂಬುದನ್ನು ಮಹಿಳೆ ಪರ ವಕೀಲರು ಸುಪ್ರೀಂ ಪೀಠದ ಮುಂದೆ ಒಪ್ಪಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಅಂಶ ಗಮನಿಸಿದರೆ ಮಹಿಳೆ ಇಚ್ಛಾಪೂರ್ವಕವಾಗಿಯೇ ಮೇಲ್ಮನವಿದಾರರ ಜತೆ ಒಪ್ಪಿತ ಸಂಬಂಧ ಹೊಂದಿದ್ದರು. ಸಂಬಂಧ ಸರಿಹೊಂದದಿದ್ದಾಗ ಅತ್ಯಾಚಾರ ಕೇಸ್ ದಾಖಲಿಸಲು ಮುಂದಾಗುವುದು ಸೂಕ್ತವಲ್ಲ ಎಂದು ತಿಳಿಸಿದೆ.
ರಾಜಸ್ಥಾನ ಹೈಕೋರ್ಟ್, ಅರ್ಜಿದಾರ ಮಹಿಳೆಗೆ ಮದುವೆಯ ಭರವಸೆ ನೀಡಿ ಆರೋಪಿ ಅನ್ಸಾರ್ ಮೊಹಮ್ಮದ್ ದೈಹಿಕ ಸಂಬಂಧ ಬೆಳೆಸಿದ್ದಾನೆ ಇಬ್ಬರ ಸಂಬಂಧದಿಂದ ಹೆಣ್ಣುಮಗು ಕೂಡ ಇದ್ದು, ವಿವಾಹಕ್ಕೆ ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವುದು ಸರಿಯಲ್ಲ ಎಂದು ತೀರ್ಪು ನೀಡಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲು ಆಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.