ಭಾರತದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವ ಸಂಪ್ರದಾಯವಿದೆ. ಈ ಸಸ್ಯವನ್ನು ಆಯುರ್ವೇದದ ನಿಧಿ ಎಂದು ಕರೆದರೆ ತಪ್ಪಾಗುವುದಿಲ್ಲ. ಏಕೆಂದರೆ ಇದರಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿವೆ.
ತುಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಕೆಮ್ಮು, ಕಫವನ್ನು ಕಡಿಮೆ ಮಾಡುತ್ತದೆ. ಹಲವು ಬಾರಿ ನಾವು ಪೂಜೆ ಅಥವಾ ಇನ್ಯಾವುದುಕ್ಕಾದರೂ ತುಳಸಿ ಎಲೆಗಳನ್ನು ಕೀಳುತ್ತೇವೆ, ನಂತರ ಅವುಗಳನ್ನು ಬಿಸಾಡಿಬಿಡುತ್ತೇವೆ. ಈ ಒಣ ತುಳಸಿ ಎಲೆಗಳನ್ನು ಕಸದ ಬುಟ್ಟಿಗೆ ಎಸೆಯಬೇಡಿ. ಅದರಿಂದಲೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಒಣ ಎಲೆಗಳನ್ನು ಸಂಗ್ರಹಿಸಿ ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ.
ಒಣಗಿದ ತುಳಸಿ ಎಲೆಗಳನ್ನು ಬಟ್ಟಲಿನಲ್ಲಿ ಸಂಗ್ರಹಿಸಿ. ಪಾತ್ರೆಯಲ್ಲಿ ಒಂದು ಒಂದು ಲೋಟ ನೀರನ್ನು ಬಿಸಿ ಮಾಡಿ ನಂತರ ಅದಕ್ಕೆ ಒಣಗಿದ ತುಳಸಿ ಎಲೆಗಳನ್ನು ಹಾಕಿ. ಅದು ಚೆನ್ನಾಗಿ ಕುದಿ ಬಂದ ಬಳಿಕ ಜರಡಿ ಸಹಾಯದಿಂದ ಶೋಧಿಸಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಮನೆಯಲ್ಲಿ ಒಣ ತುಳಸಿ ಎಲೆಗಳು ಸಂಗ್ರಹವಾಗಿದ್ದರೆ ಅದನ್ನು ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಳ್ಳಿ. ಈ ಪುಡಿಯನ್ನು ಔಷಧಗಳಿಗೆ ಬಳಸಬಹುದು. ಅಡುಗೆಗೂ ಬಳಸಿದರೆ ತಿನಿಸುಗಳ ರುಚಿ ಹೆಚ್ಚುತ್ತದೆ. ಸಲಾಡ್ ಅಥವಾ ಪಿಜ್ಜಾಕ್ಕೆ ಉತ್ತಮ ರುಚಿಯನ್ನು ನೀಡಲು ನೀವು ಒಣಗಿದ ತುಳಸಿ ಎಲೆಗಳನ್ನು ಬಳಸಬಹುದು. ಈ ಎಲೆಗಳ ಸಹಾಯದಿಂದ ಮಸಾಲೆ ತಯಾರಿಸಬಹುದು ಮತ್ತು ಈ ತಿನಿಸುಗಳ ಮೇಲೆ ಗಾರ್ನಿಶ್ ಮಾಡಿಕೊಂಡು ಸವಿಯಬಹುದು.
ಒಣಗಿದ ತುಳಸಿ ಎಲೆಗಳನ್ನು ಗೊಬ್ಬರವಾಗಿಯೂ ಬಳಸಬಹುದು. ಸಾಕಷ್ಟು ಎಲೆಗಳು ಸಂಗ್ರಹವಾಗಿದ್ದರೆ ಅದನ್ನು ಕೈಗಳಿಂದ ಪುಡಿಮಾಡಿ ಮತ್ತು ಮಣ್ಣಿನೊಂದಿಗೆ ಮಿಶ್ರಣ ಮಾಡಿ. ಇದನ್ನು ಬೇರುಗಳಲ್ಲಿ ಹಾಕಿದರೆ ಆ ಗಿಡದ ಬೆಳವಣಿಗೆ ಚೆನ್ನಾಗಿರುತ್ತೆ.