ಮಹಾರಾಷ್ಟ್ರದ ಪುಣೆಯಲ್ಲಿ ಅಪ್ಪ-ಮಗ ಒಟ್ಟಿಗೇ ಇತ್ತೀಚೆಗೆ 10ನೇ ತರಗತಿಯ ಪರೀಕ್ಷೆ ಬರೆದಿದ್ದರು. ಇವರಿಬ್ಬರ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಭಾರೀ ಅಚ್ಚರಿಗೆ ಕಾರಣವಾಗಿದೆ. ಪರೀಕ್ಷೆಯಲ್ಲಿ 43 ವರ್ಷದ ತಂದೆ ತೇರ್ಗಡೆಯಾಗಿದ್ದಾನೆ. ಆದ್ರೆ ಮಗ ಪಾಸ್ ಆಗಿಲ್ಲ.
ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ 10 ನೇ ತರಗತಿಯ ಫಲಿತಾಂಶ ಹೊರಬಿದ್ದಿದೆ. ಭಾಸ್ಕರ್ ವಾಘಮಾರೆ 10ನೇ ಕ್ಲಾಸ್ ಪಾಸ್ ಮಾಡಿದ್ದಾರೆ. ಭಾಸ್ಕರ್, ಬಡತನದ ಕಾರಣದಿಂದ 7ನೇ ತರಗತಿಗೇ ಶಾಲೆ ಬಿಡಬೇಕಾಗಿ ಬಂದಿತ್ತು. ಮುಂದೆ ಓದಬೇಕು ಅನ್ನೋ ಹಂಬಲ ಇದ್ದಿದ್ದರಿಂದ 30 ವರ್ಷಗಳ ನಂತರ ಮಗನ ಜೊತೆಗೆ ಮತ್ತೆ ಪರೀಕ್ಷೆ ಕಟ್ಟಿದ್ದಾರೆ.
ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿರೋ ಭಾಸ್ಕರ್‌ಗೆ 10ನೇ ತರಗತಿ ಪಾಸ್ ಮಾಡಿರೋದು ಖುಷಿ ಕೊಟ್ಟಿದೆ. ಮಗನೂ ಪರೀಕ್ಷೆ ಬರೆಯುವ ತಯಾರಿಯಲ್ಲಿ ಇದ್ದಿದ್ರಿಂದ ಭಾಸ್ಕರ್‌ಗೆ ಓದಲು ಮತ್ತಷ್ಟು ಸಹಾಯವಾಗಿತ್ತು. ಆದ್ರೆ ಮಗ 2 ವಿಷಯಗಳಲ್ಲಿ ಫೇಲ್ ಆಗಿರೋದು ಅವರಿಗೆ ಬೇಸರ ತಂದಿದೆಯಂತೆ.
ಪ್ರತಿದಿನ ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕ ತಪ್ಪದೇ ಓದುತ್ತಿದ್ದರು ಭಾಸ್ಕರ್. ಇದೀಗ ಮಗನಿಗೆ ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹಾಯ ಮಾಡಲು ನಿರ್ಧರಿಸಿದ್ದಾರೆ. ಬೇರೆ ಯಾವುದಾದರೂ ಕೋರ್ಸ್ ಮಾಡಿಕೊಂಡು ಒಳ್ಳೆ ಸಂಬಳದ ಕೆಲಸಕ್ಕೆ ಸೇರಬೇಕು ಎನ್ನುವ ಹಂಬಲ ಅವರಿಗಿದೆ.