ಕಬೀರ್ ಖಾನ್ ಬಂಡವಾಳ ಹೂಡಿರುವ 1983ರ ವಿಶ್ವಕಪ್ ಪಂದ್ಯದ ಕತೆಯನ್ನು ವಿವರಿಸುವ ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ʼ83ʼ ಸಿನಿಮಾ ಡಿಸೆಂಬರ್ 24ರಂದು ತೆರೆ ಕಂಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಈ ಸಿನಿಮಾ ಬಾಕ್ಸಾಫೀಸಿನಲ್ಲಿ ನೀರಸ ಪ್ರದರ್ಶನ ತೋರುತ್ತಿದೆ.
ದೇಶದಲ್ಲಿ ಕೋವಿಡ್ 19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿ ಇದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಈಗಾಗಲೇ ಜೆರ್ಸಿ ಹಾಗೂ ಆರ್ಆರ್ಆರ್ನಂತಹ ಕೋಟಿ ಬಂಡವಾಳದ ಸಿನಿಮಾಗಳನ್ನು ಈಗಾಗಲೇ ಮುಂದೂಡಲಾಗಿದೆ. ಆದರೆ ಈಗಾಗಲೇ ತೆರೆ ಕಂಡಿರುವ ʼ83ʼ ಸಿನಿಮಾಗೆ ಈ ನಿರ್ಬಂಧಗಳು ತಡೆಯೊಡ್ಡುತ್ತಿವೆ. ಈ ವಿಚಾರವಾಗಿ ಮಾತನಾಡಿದ ಕಬೀರ್ ಖಾನ್ ಕೊರೊನಾ ಕಾರಣದಿಂದಾಗಿ ನಿರ್ಬಂಧಗಳನ್ನು ಇನ್ನಷ್ಟು ಹೆಚ್ಚಿಸಿದಲ್ಲಿ ತಾವು ʼ83ʼ ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ನಾಳೆಯೇ ಸಿನಿಮಾ ಪ್ರದರ್ಶನವನ್ನು ಬಂದ್ ಮಾಡಬೇಕಾ ಅಥವಾ ಇನ್ನೂ ಹೆಚ್ಚಿನ ದಿನ ಸಿನಿಮಾ ಪ್ರದರ್ಶನಕ್ಕೆ ನಮಗೆ ಅವಕಾಶ ಇದೆಯಾ ಎಂಬುದು ನಮಗೆ ತಿಳಿದಿಲ್ಲ. ಇನ್ನೂ ಹೆಚ್ಚಿನ ನಿರ್ಬಂಧಗಳು ಹೇರಿದರೆ ನಾವು ಶೀಘ್ರದಲ್ಲೇ ವೆಬ್ನಲ್ಲಿ ಬಿಡುಗಡೆ ಮಾಡುತ್ತೇವೆ. ಆದರೆ ಜನರು ಆದಷ್ಟು ಚಿತ್ರ ಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸಿ ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದು ಕಬೀರ್ ಖಾನ್ ಹೇಳಿದರು.
ಈ ಸಿನಿಮಾ 18 ತಿಂಗಳ ಹಿಂದೆಯೇ ತಯಾರಾಗಿತ್ತು. ಜನರು ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿಯೇ ನೋಡಬೇಕು ಎಂದು ನಾವು ಕಾದಿದ್ದೆವು. ಈ ಸಿನಿಮಾ ರಿಲೀಸ್ಗೆ ಒಂದು ಸುರಕ್ಷಿತ ಸಮಯವನ್ನು ಆಯ್ಕೆ ಮಾಡಲು ನಾವು ಸಾಕಷ್ಟು ಮುತುವರ್ಜಿ ವಹಿಸಿದ್ದೆವು. ಆದರೆ ಯಾವತ್ತು ಈ ಸಿನಿಮಾ ರಿಲೀಸ್ ಆಯ್ತೋ ಅಂದಿನಿಂದ ಕೊರೊನಾ ಕೇಸ್ಗಳು ಹೆಚ್ಚಾಗತೊಡಗಿದವು. ನಾಲ್ಕನೇ ದಿನಕ್ಕೆ ದೆಹಲಿಯಲ್ಲಿ ಚಿತ್ರಮಂದಿರಗಳು ಬಂದ್ ಆದವು ಎಂದು ಹೇಳಿದರು.
ಬಾಕ್ಸಾಫೀಸ್ ಕಲೆಕ್ಷನ್ ವಿಚಾರವಾಗಿಯೂ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಬಾಕ್ಸಾಫೀಸಿನ ಬಗ್ಗೆ ಮಾತನಾಡುವುದು ಸ್ವಲ್ಪ ಕಷ್ಟವಾಗಿದೆ.ನಾವು ಕೊರೊನಾ ಮಹಾಮಾರಿಯ ಜೊತೆ ಬದುಕುತ್ತಿದ್ದೇವೆ. ಸಿನಿಮಾ ಬಿಡುಗಡೆಯಾಗುವಾಗ ನಮಗೆ ಇದು ತಲೆಯಲ್ಲಿ ಇರಲಿಲ್ಲ. ಸಿನಿಮಾ ಬಿಡುಗಡೆ ಬಳಿಕ 2 ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ. ನಾಲ್ಕನೇ ದಿನಕ್ಕೆ ನಮ್ಮ ಬಾಕ್ಸಾಫೀಸ್ ಕಲೆಕ್ಷನ್ನ ದೊಡ್ಡ ಭಾಗವಾದ ದೆಹಲಿಯಲ್ಲಿ ಥಿಯೇಟರ್ಗಳು ಮುಚ್ಚಿದವು ಎಂದು ಹೇಳಿದರು.