ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕವು ಹಲವಾರು ಜನರ ಜೀವನವನ್ನು ಇನ್ನಿಲ್ಲದಂತೆ ಛಿದ್ರಗೊಳಿಸಿತು. ವ್ಯಾಪಾರಗಳು, ಯೋಜನೆಗಳು ಮತ್ತು ಸಾಮಾನ್ಯವಾಗಿ ದೈನಂದಿನ ಜೀವನವು ಸಹಜತೆಯನ್ನು ಕಳೆದುಕೊಂಡಿತು. ಅನೇಕ ಮಂದಿ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು.
ಇದೇ ರೀತಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿದ್ದ ವಿಶಾಲ್ ವಿಶ್ವನಾಥ್ ಕೂಡ ಕೋವಿಡ್-19ನ ಕಠಿಣ ಹೊಡೆತಗಳಿಗೆ ಸಿಲುಕಿ ನಲುಗಿದ್ದರು. ಈ ನಡುವೆ ಅವರು ದೇಶಾದ್ಯಂತ ಸಂಚರಿಸಲು ನಿರ್ಧರಿಸಿದ್ರು. ಕೇರಳದ ಕಣ್ಣೂರು ಮೂಲದ ವಿಶಾಲ್ ದೇಶವನ್ನು ಸುತ್ತಲು ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ರು.
ಪ್ರಸ್ತುತ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿರುವ ವಿಶಾಲ್, 278 ದಿನಗಳಲ್ಲಿ ದೇಶಾದ್ಯಂತ 28 ರಾಜ್ಯಗಳನ್ನು ಪ್ರಯಾಣಿಸಿದ್ದಾರೆ. ಇದರಲ್ಲಿ ಅಂಥಾ ವಿಶೇಷತೆ ಏನು ಅಂತೀರಾ..? ವಿಶಾಲ್ ಅವರ ಈ ಸಂಪೂರ್ಣ ಪ್ರಯಾಣಕ್ಕೆ ವೆಚ್ಚವಾಗಿದ್ದು ಕೇವಲ 12,000 ರೂ.ಗಳು..!
ವಿಶಾಲ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳಿಂದ ತಾವು ಸುತ್ತುತ್ತಿದ್ದ ಸ್ಥಳಗಲ್ಲಿ ಟೆಂಟ್ ಹಾಕಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲದೆ ಸಿಕ್ಕ ಸಿಕ್ಕ ಸ್ಥಳಗಳಲ್ಲೆಲ್ಲಾ ಮಲಗುತ್ತಿದ್ದರು. ಹೆಚ್ಚಿನ ಸಮಯ ಹಣ್ಣುಗಳನ್ನು ತಿನ್ನುತ್ತಿದ್ದರು. ಪ್ರಯಾಣದ ಉದ್ದಕ್ಕೂ ತಾನಿದ್ದ ಜೀವನ ಶೈಲಿಯನ್ನು ಅವರು ವಿವರಿಸಿದ್ದಾರೆ.
ತಮ್ಮ ಅನುಭವಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ವಿಶಾಲ್ ತಿಳಿಸಿದ್ದಾರೆ. ಅವರು ಭೇಟಿ ನೀಡಿದ ಸ್ಥಳಗಳು, ಭೇಟಿಯಾದ ಜನರು, ಏರಿದ ಪರ್ವತಗಳು, ನಡೆದ ರಸ್ತೆಗಳು, ಸೇವಿಸಿದ ಆಹಾರ, ಪ್ರತಿ ಕ್ಷಣವೂ ತನ್ನನ್ನು ವಿಭಿನ್ನ ರೀತಿಯ ಭಾವನೆಗಳಿಗೆ ಕರೆದೊಯ್ಯಿತು ಎಂದು ವಿಶಾಲ್ ಹೇಳಿದ್ದಾರೆ.
ವಿಶಾಲ್ ಪ್ರಯಾಣವು ಬೆಂಗಳೂರಿನಿಂದ ಗುವಾಹಟಿಗೆ ರೈಲಿನಲ್ಲಿ ಪ್ರಾರಂಭವಾಯಿತು. ನಂತರ ಅರುಣಾಚಲ ಪ್ರದೇಶ, ಗೋವಾ, ಕರ್ನಾಟಕದಿಂದ ಸಾಗಿ ಅಂತಿಮವಾಗಿ ತಮ್ಮ ತವರೂರು ಕಣ್ಣೂರು ತಲುಪಿದ್ರು. ವಿಭಿನ್ನ ಜನರೊಂದಿಗೆ ಸಂವಹನ ಮಾಡುವುದು ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವುದು ತನ್ನ ಗುರಿಯಾಗಿತ್ತು. ಈ ಪ್ರವಾಸವು 32 ವರ್ಷಗಳಲ್ಲಿ ತಾನು ಹೊಂದಿದ್ದಕ್ಕಿಂತ ಹೆಚ್ಚಿನ ಅನುಭವವನ್ನು ನೀಡಿತು ಎಂದು ಅವರು ತಿಳಿಸಿದ್ದಾರೆ.