ಮುಂಬೈ: ಭಾರತದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತವೆ. ಅವುಗಳಲ್ಲಿ ಹೆಚ್ಚಿನವು ರಸ್ತೆ ಸುರಕ್ಷತಾ ನಿಯಮಗಳ ಮಹತ್ವವನ್ನು ಜನರು ಅರಿತುಕೊಳ್ಳದ ಕಾರಣ ಸಂಭವಿಸುತ್ತವೆ.
ಹೌದು, ಮೋಟಾರು ಸೈಕಲ್ ಸವಾರರು ಮತ್ತು ಮಾಲೀಕರು ಸಾಮಾನ್ಯವಾಗಿ ಟ್ರಾಫಿಕ್ ನಿಯಮಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಇದರಿಂದ ತಮ್ಮದು ಮಾತ್ರವಲ್ಲದೆ ಇತರರ ಪ್ರಾಣವನ್ನು ಸಹ ಅಪಾಯಕ್ಕೆ ಸಿಲುಕಿಸುತ್ತಾರೆ. ಇದೀಗ ಒಂದೇ ಸ್ಕೂಟರ್‌ನಲ್ಲಿ ಆರು ಜನರು ಕುಳಿತಿರುವ ಮುಂಬೈನ ವೈರಲ್ ಆಗಿರುವ ವಿಡಿಯೋ ಇದಕ್ಕೆ ಉದಾಹರಣೆಯಾಗಿದೆ. ವಿಡಿಯೋದಲ್ಲಿ, ಐವರು ಯುವಕರು ಬೈಕ್ ಸೀಟಿನಲ್ಲಿ ಕುಳಿತಿದ್ದರೆ, ಆರನೇಯವನು ವ್ಯಕ್ತಿಯ ಭುಜದ ಮೇಲೆ ಕುಳಿತಿದ್ದನು. ಇದು ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾತ್ರವಲ್ಲದೆ ಅವರ್ಯಾರೂ ಹೆಲ್ಮೆಟ್ ಧರಿಸಿರುವುದು ಕೂಡ ಕಂಡು ಬಂದಿಲ್ಲ.
ಟ್ವಿಟ್ಟರ್ ಬಳಕೆದಾರ ರಮಣದೀಪ್ ಸಿಂಗ್ ಹೋರಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 5 ಸೆಕೆಂಡ್ ಗಳಿರುವ ಈ ವಿಡಿಯೋದಲ್ಲಿ ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಆರು ಮಂದಿ ಇರುವುದನ್ನು ನೋಡಬಹುದು. ಇನ್ನು, ಈ ವಿಡಿಯೋಗೆ ಪ್ರತಿಕ್ರಿಯಿಸಿದ ಮುಂಬೈ ಟ್ರಾಫಿಕ್ ಪೊಲೀಸರು, ಮುಂದಿನ ಕ್ರಮಕ್ಕಾಗಿ ನಿಖರವಾದ ಸ್ಥಳದ ವಿವರಗಳನ್ನು ನೀಡುವಂತೆ ಬಳಕೆದಾರರಲ್ಲಿ ಕೋರಿದ್ದಾರೆ.
ಈ ಮಧ್ಯೆ ವಿಡಿಯೋ 38,000ಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಇಂತಹ ಬೇಜವಾಬ್ದಾರಿ ಮತ್ತು ಅಪಾಯಕಾರಿ ರೈಡ್ ಮಾಡಿದ್ದಕ್ಕಾಗಿ ಯುವಕರನ್ನು ದೂಷಿಸಿದ್ದಾರೆ.