ಕೊರೊನಾ ಆತಂಕದ ಮಧ್ಯೆಯೇ ಸರ್ಕಾರವು ಕಠಿಣ ನಿಯಮಗಳನ್ನು ಸಡಿಲಿಕೆ ಮಾಡಿ ಶಾಲೆಗಳನ್ನು ಆರಂಭಿಸಿದೆ. ಆದರೆ, ಇಂದಿಗೂ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿದೆ.
ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹೋತಪೇಟ ಎಂಬಲ್ಲಿನ ಜವಾಹರ ನವೋದಯ ಶಾಲೆಯ 7 ಜನ ಸಿಬ್ಬಂದಿ ಸೇರಿದಂತೆ 68 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಶಾಲೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಸುಮಾರು 35 ಜನ ಸಿಬ್ಬಂದಿ ಹಾಗೂ 528 ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಜನ ಸಿಬ್ಬಂದಿ ಹಾಗೂ 68 ಜನ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಸೋಂಕಿನ ಗಂಭೀರತೆ ಕಂಡು ಬಂದಿಲ್ಲ. ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ, ಈ ಶಾಲೆಗೆ ಒಂದು ವಾರ ರಜೆ ಘೋಷಿಸಲಾಗಿದೆ.
ಹಲವು ವಿದ್ಯಾರ್ಥಿಗಳು ಪಾಲಕರೊಂದಿಗೆ ಮನೆಗೆ ತೆರಳಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್. ಅವರು ವೈದ್ಯಾಧಿಕಾರಿಗಳೊಂದಿಗೆ ಶಾಲೆಗೆ ಆಗಮಿಸಿ, ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ, ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ.