ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ಇನ್ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಸೋಮವಾರ ವರದಿಯಾಗಿದೆ.
ಜನವರಿ 3ರಿಂದ ಪುಣೆಯ 232 ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ನಿಜ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಪ್ರಸ್ತುತ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಉಳಿದವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ 232 ಸೋಂಕಿತರಲ್ಲಿ 30 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿದ್ದು, ಉಳಿದವರು ಇತರ ಸಿಬ್ಬಂದಿ ಎಂದು ತಿಳಿದು ಬಂದಿದೆ. ಮಾರ್ಚ್ 2020 ರಲ್ಲಿ ಪುಣೆಯಲ್ಲಿ ಒಟ್ಟು 2,670 ಪೊಲೀಸ್ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದರು.
ಭಾನುವಾರ, ಪುಣೆಯಲ್ಲಿ 6,464 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 19% ಪಾಸಿಟಿವಿಟಿ ದರ ದಾಖಲಾಗಿದೆ. ಭಾನುವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ, ಪುಣೆ ಪೊಲೀಸರು ನಗರ ವ್ಯಾಪ್ತಿಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ವಿಧಿಸಿದ್ದಾರೆ. ನಗರದಲ್ಲಿ ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆಯವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ಸಹ ನಿಷೇಧಿಸಲಾಗಿದೆ.