ಉದ್ಘಾಟನೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಾಗುತ್ತಿರುವ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಈಗ ಇತ್ತೀಚೆಗೆ ಸುರಿದ ಒಂದೇ ಮಳೆಗೆ ಕೆರೆಯಂತಾಗಿದ್ದು, ಚಾಲಕರು ಹಿಡಿಶಾಪ ಹಾಕಿಕೊಂಡು ಸಂಚರಿಸಿದ್ದಾರೆ.
ರಾಮನಗರ ತಾಲೂಕಿನ ಸಂಗಬಸವನ ದೊಡ್ಡಿಯ ಬಳಿ ಹೆದ್ದಾರಿ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದ್ದಾರೆ. ಬೇಸಿಗೆಯಲ್ಲಿ ಸುರಿದ ವರ್ಷದ ಮೊದಲ ಮಳೆಗೆ ಈ ಪರಿಸ್ಥಿತಿ ಆದರೆ ಮಳೆಗಾಲದಲ್ಲಿ ಏನು ಕಥೆ ಎಂಬ ಆತಂಕ ಈಗ ವಾಹನ ಸವಾರರನ್ನು ಕಾಡತೊಡಗಿದೆ.
ಕೆಲ ದಿನಗಳ ಹಿಂದೆ ಮೇಲ್ಸೇತುವೆಯಲ್ಲಿ ರಸ್ತೆ ಕಿತ್ತು ಬಂದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಳಪೆ ಕಾಮಗಾರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಈ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂಬ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.