ನವದೆಹಲಿ: ಜಾಗತಿಕ ಐಟಿ ದಿಗ್ಗಜ ಮೈಕ್ರೋಸಾಫ್ಟ್ನ ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ಬುಧವಾರ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಎನ್. ಚಂದ್ರಶೇಖರನ್ ಮತ್ತು ಅದರ ಮಾಜಿ ಛೇರ್ಮನ್ ರತನ್ ಟಾಟಾ ಅವರನ್ನು ಭೇಟಿ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ದಿಗ್ಗಜರ ಫೋಟೋ ನೋಡಿ ಮಿಲಿಯನ್ ಡಾಲರ್‍ಸ್ ಚಿತ್ರ ಎಂದು ಶ್ಲಾಘಿಸಿದ್ದಾರೆ.
ಈ ಮೂವರ ಸಮ್ಮಿಲನ ಬಹಳಷ್ಟು ಕುತೂಹಲ ಮೂಡಿಸಿದೆ. ಬಿಲ್ ಗೇಟ್ಸ್ ಅವರ ಗೇಟ್ಸ್ ಫೌಂಡೇಶನ್ ಸಂಸ್ಥೆ ಈ ಭೇಟಿಯನ್ನು ಟ್ವೀಟ್ ಮೂಲಕ ದೃಢಪಡಿಸಿದೆ. ಈ ಮೂರು ದಿಗ್ಗಜರು ಆರೋಗ್ಯ, ತಪಾಸಣೆ, ನ್ಯೂಟ್ರಿಶನ್ ಮೊದಲಾದ ಕ್ಷೇತ್ರದ ಬಗ್ಗೆ ಚರ್ಚಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗ, ಸಮನ್ವಯತೆ ಸಾಧಿಸುವ ಬಗೆ ಬಗ್ಗೆ ಮಾತನಾಡಿದರೆನ್ನಲಾಗಿದೆ.
ನಮ್ಮ ಸಂಸ್ಥಾಪಕ ಹಾಗೂ ಸಹ–ಛೇರ್ಮನ್ ಬಿಲ್ ಗೇಟ್ಸ್ ಅವರು ರತನ್ ಟಾಟಾ ಮತ್ತು ಎನ್. ಚಂದ್ರಶೇಖರನ್ ಜೊತೆ ಉತ್ತಮ ರೀತಿಯ ಚರ್ಚೆಯಲ್ಲಿ ಭಾಗಿಯಾದರು. ಅವರ ಲೋಕೋಪಯೋಗಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಒಟ್ಟಿಗೆ ಕೆಲಸ ಮಾಡಲು ಮತ್ತು ಆರೋಗ್ಯ, ತಪಾಸಣೆ ಮತ್ತು ಪೌಷ್ಟಿಕಾಂಶ ಕ್ಷೇತ್ರದಲ್ಲಿ ಸಹಭಾಗಿತ್ವ ಎದುರುನೋಡುತ್ತಿದ್ದೇವೆ ಎಂದು ಗೇಟ್ಸ್ ಫೌಂಡೇಶನ್ನಿಂದ ಟ್ವೀಟ್‌ನಲ್ಲಿ ತಿಳಿಸಲಾಗಿದೆ.