ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ʼಲಡ್ಕಿ ಹೂಂ ಲಡ್ ಸಕ್ತಿ ಹೂಂʼ ಎಂದು ಕಣಕ್ಕಿಳಿದಿರುವ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಯಾರು ಅನ್ನೋದೇ ಸಧ್ಯದ ಕುತೂಹಲವಾಗಿದೆ. ಶುಕ್ರವಾರ ಈ ಬಗ್ಗೆ ದೊಡ್ಡ ಸುಳಿವು ನೀಡಿದ್ದ ಪ್ರಿಯಾಂಕ ಗಾಂಧಿ ಶನಿವಾರ ತಮ್ಮ ವರಸೆಯನ್ನೆ ಬದಲಾಯಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ ‘ನಾನಲ್ಲ’ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ನಾನಲ್ಲ, ನಾನೇ ಮುಖ್ಯಮಂತ್ರಿಯಾಗುತ್ತೀನಿ ಎಂದು ಹೇಳುತ್ತಿಲ್ಲಾ. ನೀವೆಲ್ಲರೂ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಿರುವುದರಿಂದ ನಾನು ಇರಿಟೇಟ್ (ಸಿಟ್ಟಿನಿಂದ) ಆಗಿ ಆ ಮಾತನ್ನು ಹೇಳಿದೆ ಎಂದಿದ್ದಾರೆ.
ಶುಕ್ರವಾರದಂದು ಯುಪಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ‘ಯುವ ಪ್ರಣಾಳಿಕೆ’ ಬಿಡುಗಡೆ ಮಾಡಿದ ನಂತರ, ಪ್ರಿಯಾಂಕಾ ಗಾಂಧಿ ತಾನೇ ಪಕ್ಷದ ಸಿಎಂ ಅಭ್ಯರ್ಥಿಯಾಗುವ ಸುಳಿವು ನೀಡಿದ್ದರು. ಯುಪಿಯ ಸಿಎಂ ಫೇಸ್(ಮುಖ) ಯಾರು ಎಂದು ಕೇಳಿದಾಗ ಪ್ರಿಯಾಂಕ, ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖವನ್ನು ನೀವು ನೋಡುತ್ತಿದ್ದೀರಾ? ದಿಖ್ ತೋ ರಹಾ ಹೈ ನಾ ಸಬ್ ಜಗಹ್ ಮೇರಾ ಚೆಹ್ರಾ (ನೀವು ನನ್ನ ಮುಖವನ್ನು ಎಲ್ಲೆಡೆ ನೋಡುತ್ತೀದ್ದಿರಾ ಅಲ್ಲವಾ) ಎಂದಿದ್ದರು.