ಬಿಹಾರ: ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಉರ್ದು ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಬಿಹಾರದ ಕತಿಹಾರ್‌ನಲ್ಲಿರುವ ಆದರ್ಶ್ ಮಿಡ್ಲ್ ಸ್ಕೂಲ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಇಬ್ಬರು ಶಿಕ್ಷಕರು ಕಪ್ಪು ಹಲಗೆಯ ಎರಡೂ ಬದಿಯಲ್ಲಿ ಎರಡು ವಿಭಿನ್ನ ಭಾಷೆಗಳನ್ನು ಕಲಿಸುತ್ತಿರುವುದನ್ನು ತೋರಿಸುತ್ತದೆ. ಈ ಘಟನೆಗೆ ಟ್ವಿಟ್ಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉರ್ದು ಪ್ರಾಥಮಿಕ ಶಾಲೆಯನ್ನು, ಶಿಕ್ಷಣ ಇಲಾಖೆಯು 2017 ರಲ್ಲಿ ನಮ್ಮ ಶಾಲೆಗೆ ಸ್ಥಳಾಂತರಿಸಿದೆ. ಶಿಕ್ಷಕರು ಒಂದೇ ತರಗತಿಯಲ್ಲಿ ಹಿಂದಿ ಮತ್ತು ಉರ್ದು ಎರಡನ್ನೂ ಕಲಿಸುತ್ತಾರೆ ಎಂದು ಶಾಲೆಯ ಸಹಾಯಕ ಶಿಕ್ಷಕಿ ಕುಮಾರಿ ಪ್ರಿಯಾಂಕಾ ಹೇಳಿದ್ದಾರೆ.
ಅದೇ ಕಪ್ಪು ಹಲಗೆಯ ಅರ್ಧಭಾಗದಲ್ಲಿ ಹಿಂದಿಯನ್ನು ಕಲಿಸಲಾಗುತ್ತದೆ. ಇನ್ನೊಂದು ಬದಿಯಲ್ಲಿ ಉರ್ದುವನ್ನು ಮತ್ತೊಬ್ಬ ಶಿಕ್ಷಕರು ಏಕಕಾಲದಲ್ಲಿ ಕಲಿಸುತ್ತಾರೆ. ಶಾಲೆಯಲ್ಲಿ ಸಾಕಷ್ಟು ತರಗತಿ ಕೊಠಡಿಗಳಿಲ್ಲ. ಹೀಗಾಗಿ ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಎರಡೂ ಭಾಷೆಗಳನ್ನು ಒಟ್ಟಿಗೆ ಕಲಿಯುವುದು ಸೂಕ್ತವಲ್ಲ. ಹೀಗಾಗಿ ಹೆಚ್ಚುವರಿ ತರಗತಿ ಕೊಠಡಿಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಮಕ್ಕಳಿಗೆ ಭಾಷೆಗಳ ನಡುವೆ ತಾರತಮ್ಯವನ್ನು ಕಲಿಸಬಾರದು ಎಂದು ಕೆಲವರು ಹೇಳಿದ್ರೆ, ಇತರರು ಪರಿಸ್ಥಿತಿ ತುಂಬಾ ಅನ್ಯಾಯ ಹಾಗೂ ಇದು ತಪ್ಪು ಎಂದು ಪ್ರತಿಕ್ರಿಯಿಸಿದ್ದಾರೆ.