ಮಕ್ಕಳಾಟವೇ ಅಂತಹದ್ದು. ಹಾಲುಗಲ್ಲದ ಮಕ್ಕಳಿಗೆ ಯಾವುದೇ ಜಾತಿ, ಧರ್ಮ, ವರ್ಣ ಬೇಧ-ಭಾವ ಇರುವುದೇ ಇಲ್ಲ. ಮಕ್ಕಳೆಲ್ಲಾ ಒಂದೆಡೆ ಸೇರಿಕೊಂಡರೆ ಅವರು ಆಟವಾಡುವುದೇ ಒಂದು ಸೊಗಸು.
ಆ ಮಕ್ಕಳ ಚೆಲ್ಲಾಟ, ತುಂಟಾಟ ಹೀಗೆ ಅವುಗಳು ಮಾಡುವುದೆಲ್ಲವೂ ಒಂದು ರೀತಿಯ ವಿನೋದದಿಂದ ಕೂಡಿರುತ್ತದೆ. ಅಂತಹ ದೃಶ್ಯಗಳನ್ನು ನೋಡಲು ಕಣ್ಣಿಗೆ ಆನಂದ ತರುತ್ತದೆ. ಇಲ್ಲೊಂದು ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ.
ಜಿಟಿಜಿಟಿ ಮಳೆಯಲ್ಲಿ ಒಂದು ಛತ್ರಿಯನ್ನಿಡಿದು ಐದಾರು ಮಕ್ಕಳು ರಸ್ತೆಯಲ್ಲಿ ಆನಂದದಿಂದ ನಡೆಯುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡು, ಅದಕ್ಕೆ, `ದೋಸ್ತ್’ ಎಂಬ ಶೀರ್ಷಿಕೆ ನೀಡಿದ್ದಾರೆ.
ಆ ಮಕ್ಕಳು ಮಳೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಛತ್ರಿಯನ್ನಿಡಿದು ಮಳೆಯಲ್ಲಿ ಮಿಂದು ಅನುಭವಿಸುತ್ತಿರುವ ಆ ಸುಮಧುರ ಕ್ಷಣವಿದೆಯಲ್ಲಾ, ಇದು ಮಕ್ಕಳಿಗೆ ಮಾತ್ರ ಅನುಭವಿಸಲು ಸಾಧ್ಯವಾಗಿದೆ. ನಮ್ಮಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಇಂತಹ ದೃಶ್ಯಗಳನ್ನು ಹೆಚ್ಚಾಗಿ ನೋಡಬಹುದಾಗಿದೆ.
ಈ ವಿಡಿಯೋ ಭಾರೀ ವೈರಲ್ ಆಗಿದ್ದು, 1.2 ಮಿಲಿಯನ್ ವೀಕ್ಷಣೆ ಕಂಡಿದೆ ಮತ್ತು ಸಾವಿರಾರು ಮಂದಿ ಈ ಮುಗ್ಧ ಮಕ್ಕಳ ಸ್ನೇಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೇ ಅಲ್ಲವೇ, ಮಕ್ಕಳ ಜೀವನಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳುವುದು.