ಮಂಡ್ಯ- ರಾಮಾಯಣ ದೊಡ್ಡ ಕಥೆ. ಇದನ್ನು ಒಂದೇ ಸಾಲಿನಲ್ಲಿ ಅಥವಾ ಒಂದೇ ಚಿತ್ರದಲ್ಲಿ ನೋಡೋದು ಅಸಾಧ್ಯದ ಮಾತು. ಇಂಥಹ ಅಸಾಧ್ಯವನ್ನ ಸಾಧ್ಯ ಮಾಡಿ ತೋರಿಸಿದ್ದಾರೆ ಮಂಡ್ಯದ ಚಿತ್ರಕಲಾ ಶಿಕ್ಷಕರೊಬ್ಬರು. ಒಂದೇ ಒಂದು ಚಿತ್ರದ ಮೂಲಕ ಸಂಪೂರ್ಣ ರಾಮಾಯಣವನ್ನು ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ಸಂತೆಕಸಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ನರಸಿಂಹಚಾರ್ ಈ ಚಿತ್ರ ಬಿಡಿಸಿದವರು. ನೋಡಿದ ತಕ್ಷಣ ಇಡೀ ರಾಮಾಯಣ ಕಾಣುವ ಈ ಚಿತ್ರ ಬಿಡಿಸಲು ಸುಮಾರು 12 ದಿನ ತೆಗೆದುಕೊಂಡಿದ್ದರು. ದಿನಕ್ಕೆ ಐದು ಗಂಟೆ ಈ ಚಿತ್ರ ಬರೆಯುತ್ತಿದ್ದರಂತೆ. ಬ್ಲ್ಯಾಕ್ ಜೆಲ್ ಪೆನ್, ಅಕ್ರಾಲಿಕ್ ಬ್ಲಾಕ್ ಕಲರ್ ಉಪಯೋಗಿ ಈ ಚಿತ್ರ ಬಿಡಿಸಿದ್ದಾರೆ.
16X24 ಅಳತೆಯ ಒಂದು ಡ್ರಾಯಿಂಗ್ ಶೀಟ್‌ನಲ್ಲಿ ಈ ಚಿತ್ರ ಬಿಡಿಸಿದ್ದಾರೆ. ಇಡೀ ಸಂಪೂರ್ಣ ರಾಮಾಯಣದ ದೃಶ್ಯಾವಳಿಗಳನ್ನು ಒಂದೇ ಚಿತ್ರದಲ್ಲಿ ಬರೆದಿದ್ದಾರೆ. ರಾಮ, ಲಕ್ಷ್ಮಣ, ಸೀತೆ, ಆಂಜನೇಯ, 10 ತಲೆಯ ರಾವಣ, ದಶರಥ, ಸೀತಾಪಹರಣ, ಅಯೋಧ್ಯೆ ಹೀಗೆ ಎಲ್ಲಾ ಪಾತ್ರಗಳನ್ನು ಇದರಲ್ಲಿ ಬರೆದಿದ್ದಾರೆ. ಈ ಹಿಂದೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಇಬ್ಬರ ಫೋಟೋವನ್ನು ಒಂದೇ ಫೋಟೋದಲ್ಲಿ ಕಾಣುವಂತೆ ಬರೆದಿದ್ದರು.