ಕೋವಿಡ್ ಸಾಂಕ್ರಮಿದಿಂದ ಎಲ್ಲೆಲ್ಲೂ ಸಂಕಷ್ಟ ನೆಲೆಸಿದ್ದು ಈ ಅವಧಿಯಲ್ಲಿ ಎಲ್ಲವೂ ಭಾರೀ ಕಷ್ಟವೆನ್ನುವಂತೆ ಆಗಿಬಿಟ್ಟಿದೆ. ಡೇಟಿಂಗ್ ಮಾಡಲೂ ಸಹ ಜನರಿಗೆ ಅವಕಾಶ ಸಿಗದ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟುಬಿಟ್ಟಿದೆ.
ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಬ್ರಿಟೀಷ್ ವಿಲ್ ಹೆಸರಿನ ವ್ಯಕ್ತಿಯೊಬ್ಬ ತಾನು ಈ ಹಿಂದೆ ಮಾತನಾಡಿದ್ದ ಮಹಿಳೆಯರೊಂದಿಗೆ ಚಾಟ್ ಮಾಡಲು ನಿರ್ಧರಿಸಿದ್ದಾನೆ. ರಿಯಲ್-ಲೈಫ್‌ನಲ್ಲಿ ಡೇಟ್ ಮಾಡಲೆಂದು ಆಸೆ ಪಟ್ಟಿದ್ದ 14 ಮಹಿಳೆಯರಿಗೆ ಗ್ರೂಪ್ ಚಾಟ್‌ನಲ್ಲಿ ಒಂದೇ ಬಾರಿಗೆ ಮೆಸೇಜ್ ಕಳುಹಿಸಿಬಿಟ್ಟಿದ್ದಾನೆ ಈ ರಸಿಕ.
“ಹೇ ಅನಾಮಿಕೆ! ಬಂಬಲ್‌ನಲ್ಲಿ ಕಳೆದ ವರ್ಷ ನಾವು ಮ್ಯಾಚ್ ಆಗಿದ್ದೆವು ಆದರೆ ಕೋವಿಡ್ ಕಾರಣದಿಂದ ಭೇಟಿಯಾಗಲು ಸಾಧ್ಯವಾಗಿಲ್ಲ. ನಾನು ಈಗ ತಾನೇ ನಗರಕ್ಕೆ ಮರಳಿ ಬಂದಿದ್ದು, ನೀನಿನ್ನೂ ಸಿಂಗಲ್ ಆಗೇ ಇದ್ದೀಯಾ ಎಂದು ಯೋಚಿಸುತ್ತಿದ್ದೇನೆ!? (ಬ್ರಿಟೀಷ್ ವಿಲ್!),” ಎಂದು ಮೆಸೇಜ್‌ನಲ್ಲಿ ಬರೆದಿದ್ದಾನೆ ಈತ.
ಈ ಸಂದೇಶವು ಒಂದೇ ಗ್ರೂಪ್‌ನಲ್ಲಿ ಇದ್ದ 14 ಮಹಿಳೆಯರಿಗೆ ಒಮ್ಮೆಲೇ ತಲುಪಿದ್ದು, ಈತನ ಮಸಲತ್ತು ಅವರೆಲ್ಲರಿಗೂ ತಿಳಿದಿದೆ.
“ಓಹ್ ಒಂದೇ ಬಾರಿಗೆ ನೀವು 14 ಹುಡುಗಿಯರಿಗೆ ಸಂದೇಶ ಕಳುಹಿಸಿದ್ದೀರಿ. ಗುಡ್‌ಬೈ ಸರ್,” ಎಂದು ಅವರಲ್ಲಿ ಒಬ್ಬ ಮಹಿಳೆ ಪ್ರತಿಕ್ರಿಯಿಸಿದರೆ, “ಹ ಹ್ಹ ಹ್ಹಾ.. ಓಹ್ ಮೈ ಗಾಡ್. ಹೌದು ಆತ ಹೀಗೆ ಮಾಡಿದ್ದಾನೆ,” ಎಂದಿದ್ದಾರೆ.
ನೋಡ್ತಾ ನೋಡ್ತಾ, ಗ್ರೂಪಲ್ಲಿದ್ದ ಮಹಿಳೆಯರೆಲ್ಲಾ ತಾವೆಲ್ಲಾ ಒಂದು ಜಾಗದಲ್ಲಿ ಮೀಟ್ ಮಾಡುವ ಮೂಲಕ, ಈತನೊಂದಿಗೆ ಡೇಟ್ ಮಾಡುವುದಕ್ಕಿಂತ ಹೆಚ್ಚಿನ ಮೋಜು ಮಾಡಬಹುದು ಎಂದು ಮಾತನಾಡಿಕೊಂಡಿದ್ದಾರೆ.
ಕೊನೆಗೆ ಆ ಗ್ರೂಪ್‌ನಲ್ಲಿದ್ದ ಮಹಿಳೆಯರೆಲ್ಲಾ ತನಗೆ ಮಂಗಳಾರತಿ ಮಾಡಲು ಆರಂಭಿಸಿದ ಬಳಿಕ ’ಬ್ರಿಟೀಷ್ ವಿಲ್ಸ್ ಏಂಜೆಲ್ಸ್’ ಎಂದು ತಾನೇ ಸೃಷ್ಟಿಸಿದ್ದ ಗ್ರೂಪ್‌ನಿಂದ ಆಚೆ ಬಿದ್ದಿದ್ದಾನೆ ಈ ಭೂಪ.