ಇತ್ತೀಚೆಗಷ್ಟೆ ಒಂದೇ ಕಾಲಿನ ಹುಡುಗಿ ಒಂದು ಕಿಲೋಮೀಟರ್ ನಡೆದು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹುಡುಗಿಯ ಕಷ್ಟ ನೋಡೊಕ್ಕಾಗದೇ ಅನೇಕರು ಸಹಾಯಕ್ಕೆ ಮುಂದಾದರು. ಈಗ ಆಕೆಗೆ ಕೃತಕ ಕಾಲಿನ ಸಹಾಯದಿಂದ ಶಾಲೆಗೆ ಹೋಗುತ್ತಿದ್ದಾಳೆ. ಈಗ ಅದೇ ರೀತಿಯ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆತ ಜಮ್ಮು ಕಾಶ್ಮೀರದಲ್ಲಿ ಹಂದ್ವಾರದಲ್ಲಿ9ನೇ ತರಗತಿ ಓದುತ್ತಿರುವ ವಿದ್ಯಾರ್ಥಿ. ಆತನ ಹೆಸರು ಪರ್ವೆಜ್. ಚಿಕ್ಕವಯಸ್ಸಿನಲ್ಲಿ ಭೀಕರ ಅಗ್ನಿ ದುರಂತದಲ್ಲಿ ಆತ ತನ್ನ ಎಡಗಾಲನ್ನ ಕಳೆದುಕೊಂಡಿದ್ದ. ಆತನಿಗೆ ಮುಂಚೆಯಿಂದಲೂ ಚೆನ್ನಾಗಿ ಓದಬೇಕು, ಏನಾದರೂ ಸಾಧಿಸಬೇಕು ಅನ್ನೋ ಹಠ. ಅದಕ್ಕಾಗಿ ಆತ ಒಂದು ಕಾಲನ್ನ ಕಳೆದುಕೊಂಡರೂ 2 ಕಿಲೋ ಮೀಟರ್ ದೂರದ ನೌಗಾಮ್ ಸರ್ಕಾರಿ ಶಾಲೆಗೆ ಹೋಗಿ ಓದುತ್ತಿದ್ದಾನೆ.
ನಾನು ದಿನಕ್ಕೆ 2 ಕಿ.ಮೀ ದೂರದ ಶಾಲೆಗೆ ಒಂದೇ ಕಾಲಿನಿಂದ ಬ್ಯಾಲೆನ್ಸ್ ಮಾಡಿಕೊಂಡು ನಡೆಯುತ್ತೇನೆ. ರಸ್ತೆ ಸರಿಯಿಲ್ಲದಿದ್ದರೂ ನಾನು ಅದನ್ನ ಸವಾಲು ಅಂದುಕೊಂಡು ಸ್ವೀಕರಿಸಿ ನಡೆಯುತ್ತೇನೆ. ನನಗೆ ಕೃತಕ ಕಾಲು ಇದ್ದರೆ ನನಗೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಜೀವನದಲ್ಲಿ ಸಾಧಿಸುವುದು ತುಂಬಾ ಇದೆ. ಇದು ಅದರೊಳಗೆ ಒಂದು ಅಷ್ಟೇ ಅಂತ 14ರ ವಯಸ್ಸಿನ ಬಾಲಕ ತುಂಬು ಹುರುಪಿನಿಂದ ಹೇಳುತ್ತಾನೆ. ಸಮಾಜ ಕಲ್ಯಾಣ ಇಲಾಖೆ ಈತನಿಗೆ ಗಾಲಿ ಕುರ್ಚಿಯನ್ನ ನೀಡಿತ್ತು. ಆದರೆ ಗ್ರಾಮದ ರಸ್ತೆಗಳ ದುಸ್ಥಿತಿಯಿಂದಾಗಿ ಅದನ್ನು ಬಳಸಲು ಸಾಧ್ಯವಾಗಲೇ ಇಲ್ಲ.
ಪರ್ವೇಜ್ ಪಾಠಗಳಲ್ಲಷ್ಟೆ ಅಲ್ಲದೇ ಆಟಗಳಲ್ಲೂ ಮುಂದಿದ್ದಾನೆ. ಆತ ಕ್ರಿಕಿಟ್, ವಾಲಿಬಾಲ್, ಕಬ್ಬಡ್ಡಿ ಆಟಗಾರನಾಗಿದ್ದಾನೆ. ಅಷ್ಟೇ ಅಲ್ಲ ಪರ್ವೇಜ್ ಹೇಳುವ ಪ್ರಕಾರ ನನ್ನ ಸ್ನೇಹಿತರು ನನಗೆ ತುಂಬಾ ಸಹಾಯ ಮಾಡುತ್ತಾರೆ. ಅವರಂತೆ ನಡೆಯಲು ನನಗೆ ಸಾಧ್ಯವಾಗುತ್ತಿಲ್ಲ ಅನ್ನೊ ಬೇಸರ ನನಗೆ ಇದೆ. ಆದರೆ ನಾನು ಧೈರ್ಯವನ್ನ ಕಳೆದುಕೊಂಡಿಲ್ಲ. ಅದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ಸರ್ಕಾರ ಇನ್ನೂ ಹೆಚ್ಚಿನ ಸಹಾಯ ಮಾಡುತ್ತೆ ಅನ್ನೊ ಆಸೆಯನ್ನ ಇಟ್ಟುಕೊಂಡಿದ್ದೇನೆ. ನನ್ನ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ನನ್ನ ತಂದೆ ಈಗಾಗಲೇ ತುಂಬಾ ಹಣವನ್ನ ಖರ್ಚು ಮಾಡಿದ್ದಾರೆ. ಈಗ ನಮ್ಮ ಬಳಿ ಹಣವಿಲ್ಲ. ಆದ್ದರಿಂದ ಸರ್ಕಾರ ಏನಾದರೂ ನನಗೆ ಕೃತಕ ಕಾಲಿನ ಸಹಾಯ ಮಾಡಿದ್ದೇ ಆಗಿದ್ದಲ್ಲಿ ನಾನು ಸರ್ಕಾರಕ್ಕೆ ಕೃತಜ್ಞನಾಗಿರುತ್ತೆನೆ ಅಂತ ಹೇಳುತ್ತಾನೆ. ಓದುವ ಹಠ, ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋ ದಕ್ಕೆ ಪರ್ವೇಜ್ ಮಾದರಿಯಾಗಿದ್ದಾನೆ.