ಇಡೀ ವಿಶ್ವಕ್ಕೆ ಕೊರೊನಾ ಸೋಂಕು ತಗುಲಿಸಿದ ಅಪಖ್ಯಾತಿಗೆ ಚೀನಾ ತುತ್ತಾಗಿದೆ. ಇಷ್ಟಾದರೂ ಆ ದೇಶ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಇದರ ಮಧ್ಯೆ ಕೊರೊನಾ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಚೀನಾದ ನಗರವೊಂದರಲ್ಲಿ ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿರುವುದರಿಂದ ಇಡೀ ನಗರವನ್ನೇ ಮೂರು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಹೌದು, ಹೆನಾನ್ ಪ್ರಾಂತ್ಯದ ವುಗಾಂಗ್ ನಗರ ಈಗ ಲಾಕ್ ಡೌನ್ ಆಗಿದೆ.
ಸೋಮವಾರ ಮಧ್ಯಾಹ್ನದಿಂದ ಗುರುವಾರ ಮಧ್ಯಾಹ್ನದವರೆಗೆ ಈ ನಗರದ 3,20,000 ಮಂದಿ ಮನೆಯಲ್ಲೇ ಇರಬೇಕಾಗಿದ್ದು, ಅಗತ್ಯ ವಸ್ತುಗಳನ್ನು ಅಧಿಕಾರಿಗಳೇ ಪೂರೈಸಲಿದ್ದಾರೆ. ಒಂದೊಮ್ಮೆ ತುರ್ತು ಕಾರಣಕ್ಕೆ ಹೊರಬರುವುದಾದರೆ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.