ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದೆಲಗ ತಿನ್ನುವುದರಿಂದ ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸಬಹುದು ಎಂಬ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಇದರ ಹೊರತಾಗಿಯೂ ನಿತ್ಯ ಒಂದೆಲಗವನ್ನು ಆಹಾರ ರೂಪದಲ್ಲೂ ಸೇವಿಸುವುದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಹಳ್ಳಿ ಪ್ರದೇಶಗಳಲ್ಲಿ ಗದ್ದೆಯ ಬದುಗಳಲ್ಲಿ ಹಾಗೂ ತೋಟದ ಅಂಚಿನಲ್ಲಿ ಹೇರಳವಾಗಿ ಹಬ್ಬಿಕೊಳ್ಳುವ ಒಂದೆಲಗ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ ಎಂಬುದನ್ನು ವಿಜ್ಞಾನವೂ ದೃಢಪಡಿಸಿದೆ. ಆಯುರ್ವೇದದಲ್ಲೂ ಇದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ.
ಇದನ್ನು ನಿತ್ಯ ಸೇವಿಸುವುದರಿಂದ ಮೆದುಳಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಹಸಿಯಾಗಿ ಇದನ್ನು ಸೇವಿಸಲು ಕಷ್ಟವಾದರೆ ಕೊತ್ತಂಬರಿ ಸೊಪ್ಪಿನ ರೂಪದಲ್ಲಿ ಸಣ್ಣಗೆ ಕತ್ತರಿಸಿಯೂ ಸಲಾಡ್ ರೂಪದಲ್ಲಿ ಸೇವಿಸಬಹುದು. ತಿನ್ನುವ ಮೊದಲು ಇದನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ.
ಇದನ್ನು ತೊಳೆದು ಒಣಗಿಸಿ, ಅಷ್ಟೇ ಪ್ರಮಾಣದ ಬಾದಾಮಿ ಹುರಿದು ಎರಡನ್ನೂ ರುಬ್ಬಿ ಏಲಕ್ಕಿ ಚಿಟಿಕೆ ಬೆರೆಸಿ ಒಂದು ಲೋಟ ಹಾಲಿಗೆ ಬೆರೆಸಿ. ಸಿಹಿಗಾಗಿ ಜೇನುತುಪ್ಪ ಅಥವಾ ಕಲ್ಲುಸಕ್ಕರೆ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗಿ ದೇಹವನ್ನು ತಂಪಾಗಿಡುತ್ತದೆ.