ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟಕ್ಕೆ ಜನತೆ ಕಂಗೆಟ್ಟು ಹೋಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಬಿಟ್ಟು ಆರಾಮವಾಗಿ ಕಾಲಹರಣ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಪುಷ್ಟಿ ನೀಡುವಂತಿದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಳೆಯ ನಡುವೆ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ಸವಿಯುತ್ತಿರುವ ವಿಡಿಯೋ.
ರಾಜಧಾನಿ ಬೆಂಗಳೂರು ಮಳೆಯ ಆರ್ಭಟಕ್ಕೆ ಬಹುತೇಕ ಮುಳುಗಡೆಯಾಗಿದೆ. ಇಡೀ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು, ಬಡಾವಣೆಗಳು, ಮನೆಗಳು ಜಲಾವೃತಗೊಂಡಿವೆ. ಅನ್ನ, ಆಹಾರಕ್ಕೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತನ್ನದೇ ಕ್ಷೇತ್ರದ ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೋಟೆಲ್ ನಲ್ಲಿ ಮಸಾಲೆ ದೋಸೆ, ವಡಾ ಸಾಂಬಾರ್ ಸವಿಯುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ ವುಡ್ ನಟಿ ರಮ್ಯಾ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿನ್ನುತ್ತಿರುವ ವಿಡಿಯೋ ಶೇರ್ ಮಾಡಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ನಗರದ ಜನರು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರೆ ಸಂಸದರು ಮಾತ್ರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.