ಈಗ ಮದುವೆ ಸೀಸನ್ ಆರಂಭವಾಗಿದ್ದು, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 32 ಲಕ್ಷ ಮದುವೆಗಳು ನಡೆಯಲಿವೆ ಎಂದು ಹೇಳಲಾಗಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿ ಒಂದರಲ್ಲೇ 3.5 ಲಕ್ಷ ಮದುವೆಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.
ವ್ಯಾಪಾರಿಗಳ ಸಂಘಟನೆ ಆಗಿರುವ ಅಖಿಲ ಭಾರತ ವರ್ತಕರ ಮಹಾಸಂಘ ಈ ಅಂದಾಜು ವರದಿಯನ್ನು ಸಿದ್ಧಪಡಿಸಿದ್ದು, ದೇಶದ 35 ನಗರಗಳಲ್ಲಿ 4,302 ವರ್ತಕರು ಹಾಗೂ ಸೇವಾದಾತರಿಂದ ಈ ಮಾಹಿತಿಗಳನ್ನು ಪಡೆಯಲಾಗಿದೆ. ಈ ಮದುವೆಗಳ ಸಂದರ್ಭದಲ್ಲಿ ಒಟ್ಟು ರೂ.3.75 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಯಲಿದೆ ಎಂಬ ನಿರೀಕ್ಷೆ ಇದೆ.
ಮದುವೆ ಸಂದರ್ಭದಲ್ಲಿ ಚಿನ್ನ, ಬೆಳ್ಳಿ, ಉಡುಪು ಸೇರಿದಂತೆ ಖರೀದಿ ಜೋರಾಗಿ ನಡೆಯಲಿದ್ದು, ಹೀಗಾಗಿ ಇಷ್ಟು ಮಟ್ಟದ ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ದೇಶದಲ್ಲಿ ಒಟ್ಟು 25 ಲಕ್ಷ ಮದುವೆಗಳು ನಡೆದಿದ್ದು, ಇವುಗಳಿಂದ ಅಂದಾಜು 3 ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆದಿತ್ತು.