ಭುವನೇಶ್ವರ: ಇಲ್ಲಿನ ಮುಕ್ತೇಶ್ವರ ದೇವಸ್ಥಾನದಲ್ಲಿರುವ ಪ್ರಸಿದ್ಧ ಮರೀಚಿ ಕುಂಡ (ಕೊಳ) ದಿಂದ ತೆಗೆದ ಒಂದು ಹೂಜಿ ಪವಿತ್ರ ನೀರಿನ ಬೆಲೆ ಕೇಳಿದ್ರೆ ಖಂಡಿತಾ ನೀವು ದಂಗಾಗ್ತೀರಾ..!
ಹೌದು, ಇಲ್ಲಿನ ಲಿಂಗರಾಜ ದೇವರ ವಾರ್ಷಿಕ ರುಕುಣ ರಥೋತ್ಸವದ ಮುನ್ನಾದಿನ ನಡೆದ ಹರಾಜಿನಲ್ಲಿ 1.3 ಲಕ್ಷ ರೂ.ಗೆ ಮಾರಾಟವಾಗಿದೆ. ಶುಕ್ರವಾರ ರಾತ್ರಿ ಮರೀಚಿ ಕುಂಡದ ಬಳಿ ಪವಿತ್ರ ಜಲದ ಹರಾಜು ಪ್ರಕ್ರಿಯೆ ನಡೆದಿದೆ. ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದು ಭಕ್ತರಲ್ಲಿ ಸಂತಾನೋತ್ಪತಿಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಲಿಂಗರಾಜ ದೇವಸ್ಥಾನದ ಸೇವಕರ ಗುಂಪು ಬೋಡು ನಿಜೋಗ್ ಹರಾಜು ಪ್ರಕ್ರಿಯೆ ನಡೆಸಿದೆ. ಭುವನೇಶ್ವರದ ಬಾರಮುಂಡಾ ಪ್ರದೇಶದ ದಂಪತಿಗಳು ಅತ್ಯಧಿಕ ಬೆಲೆಯನ್ನು ನೀಡಿದ್ದು, ಮೂಲ ಬೆಲೆ ಕೇವಲ 25,000 ರೂ.ಗಳಾಗಿದ್ದರೆ, ಅವರು 1.30 ಲಕ್ಷ ರೂಪಾಯಿ ಪಾವತಿಸಿ ಮೊದಲ ಒಂದು ಹೂಜಿ ನೀರು ಪಡೆದಿದ್ದಾರೆ. ಅದೇ ರೀತಿ ಮೂಲ ಬೆಲೆ 16,000 ರೂ. ಇದ್ದ ಎರಡನೇ ಹೂಜಿ ನೀರು 47,000 ರೂ.ಗೆ ಹರಾಜಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ನೀರು ಹರಾಜು ಪ್ರಕ್ರಿಯೆ ನಡೆಸಲಾಗಿರಲಿಲ್ಲ.
ಈ ನೀರಿನಲ್ಲಿನ ನಂಬಿಕೆಯ ಹಿಂದೆ ಅಂತಹ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಒಂದು ಹೂಜಿ ನೀರಿನಿಂದ ಸ್ನಾನ ಮಾಡುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಮರೀಚಿ ಕುಂಡವು ಅನೇಕ ಅಶೋಕ ಮರಗಳಿಂದ ಆವೃತವಾಗಿರುವುದರಿಂದ ನೀರು ಕೆಲವು (ಇತರ) ಔಷಧೀಯ ಗುಣಗಳನ್ನು ಹೊಂದಿರಬಹುದು ಎಂಬುದನ್ನು ಅಲ್ಲಗಳೆಯುವುದಿಲ್ಲ ಎಂದು ಖ್ಯಾತ ಸ್ತ್ರೀರೋಗತಜ್ಞ ಡಾ. ಸಂತೋಷ್ ಮಿಶ್ರಾ ಹೇಳಿದ್ದಾರೆ.