ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಕೊರೊನಾದ ಒಂದು ಲಸಿಕೆಯನ್ನು ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿದ್ದು ಇದನ್ನು ಕೆಲವರು ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದು ವಜಾಗೊಂಡ ಹಿನ್ನೆಲೆಯಲ್ಲಿ ಸುಪ್ರೀಂ ಮೆಟ್ಟಿಲೇರಿದ್ದು, ಇದೀಗ ‘ಸುಪ್ರೀಂ’ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದು, ಇದರಿಂದಾಗಿ ಒಂದು ಡೋಸ್ ಕೊರೊನಾ ಲಸಿಕೆ ನಿಯಮಕ್ಕೆ ಸುಪ್ರೀಂ ಕೋರ್ಟ್ ಕೂಡಾ ಗ್ರೀನ್ ಸಿಗ್ನಲ್ ತೋರಿಸಿದಂತಾಗಿದೆ.
ಒಂದು ಡೋಸ್ ಕೊರೊನಾ ಲಸಿಕೆ ನಿಯಮ ಪ್ರಶ್ನಿಸಿದ್ದ ಮನವಿದಾರರ ಅರ್ಜಿ ಹೈಕೋರ್ಟಿನಲ್ಲಿ ತಿರಸ್ಕೃತಗೊಂಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೇಳೆ ನ್ಯಾಯಮೂರ್ತಿಗಳು, ಲಸಿಕೆ ಪಡೆಯಲು ನಿಮಗೆ ಕಷ್ಟವೇನು ಎಂದು ಪ್ರಶ್ನಿಸಿದ್ದಾರೆ.
ಅರ್ಜಿದಾರರು, ತಮಗೆ ಆಯುರ್ವೇದದಲ್ಲಿ ಹೆಚ್ಚಿನ ನಂಬಿಕೆ ಇದೆ. ಅಲ್ಲದೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ. ಹೀಗಾಗಿ ತಮಗೆ ಕೊರೊನಾ ಲಸಿಕೆ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿರುವ ಕಾರಣ ಸರ್ಕಾರದ ಒಂದು ಡೋಸ್ ಲಸಿಕೆ ಕಡ್ಡಾಯ ನಿಯಮವನ್ನು ಎತ್ತಿಹಿಡಿದಂತಾಗಿದೆ.