ದೇಶದಲ್ಲಿ ಜಾತಿ, ಧರ್ಮ ಮುಂತಾದ ವಿಚಾರಕ್ಕೆ ಜಗಳಗಳಾಗುತ್ತಿವೆ. ಆದರೆ, ಅದೆಷ್ಟೋ ಹಳ್ಳಿಗಳಲ್ಲಿ ಸುಸಜ್ಜಿತ ರಸ್ತೆ, ಆಸ್ಪತ್ರೆಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಹಳ್ಳಿಗರ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಇದೀಗ ಗರ್ಭಿಣಿಯನ್ನು ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ಇತರ ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಛತ್ತೀಸ್ಗಢದ ದಾಂತೇವಾಡದಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು ದಾಂತೇವಾಡದ ಹತ್ತಿರದ ಆಸ್ಪತ್ರೆಗೆ ಮಂಚದ ಸಹಿತ ಸಾಗಿಸಿದ್ದಾರೆ. ಇದೀಗ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ.
ಗ್ರಾಮಸ್ಥರ ಜೊತೆ ಯೋಧ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿರುವ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ಒಂದು ಕೈಯಲ್ಲಿ ಬಂದೂಕು ಹಿಡಿದಿರುವುದನ್ನು ಮತ್ತು ಇನ್ನೊಂದು ಭುಜದ ಮೇಲೆ ಮಂಚವನ್ನು ಹೊತ್ತಿರುವುದನ್ನು ಕಾಣಬಹುದು. ಗರ್ಭಿಣಿಯನ್ನು ಹೊತ್ತೊಯ್ಯಲು ಅವರು ಗ್ರಾಮಸ್ಥರಿಗೆ ಸಹಾಯ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಯೋಧನ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.