ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಲಿಂಗದ ಮಿತಿಯಿಲ್ಲ. ಪ್ರೀತಿಯೆಂಬುದು ಯಾರಿಗೆ ಯಾವ ಸಮಯದಲ್ಲಿ ಹುಟ್ಟುತ್ತದೋ ಹೇಳಲಾಗದು. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಒಂದೇ ದಿನ ತ್ರಿವಳಿಗಳನ್ನು ವಿವಾಹವಾಗಿರುವ ವಿಲಕ್ಷಣ ಘಟನೆ ಪ್ರಜಾಸತ್ತಾತ್ಮಕ ಗಣರಾಜ್ಯ ಕಾಂಗೋದಲ್ಲಿ ನಡೆದಿದೆ.
ಕಾಂಗೋದಲ್ಲಿ ಬಹುಪತ್ನಿತ್ವವು ಅಸ್ತಿತ್ವದಲ್ಲಿದೆ. ಅಲ್ಲಿನ ಜನರು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಮದುವೆಯಾಗಲು ಕಾನೂನುಬದ್ಧವಾಗಿ ಮುಕ್ತರಾಗಿದ್ದಾರೆ. ಮೂವರು ಸಹೋದರಿಯರು ಒಬ್ಬನೇ ವ್ಯಕ್ತಿಗೆ ಪ್ರೇಮ ನಿವೇದನೆ ಮಾಡಿದ್ದರಿಂದ, ಆತ ಮೂವರನ್ನು ಕೂಡ ಒಪ್ಪಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾನೆ.
32 ವರ್ಷ ವಯಸ್ಸಿನ ಲುವಿಜೊ ಎಂಬಾತ ನಾಡೆಗೆ, ನತಾಶಾ ಮತ್ತು ನಟಾಲಿ ಎಂಬ ತ್ರಿವಳಿಗಳನ್ನು ವಿವಾಹವಾಗಿದ್ದಾರೆ. ಮೂವರು ಒಮ್ಮೆಲೇ ಪ್ರೇಮ ನಿವೇದನೆ ಮಾಡಿದಾಗ ಪ್ರಸ್ತಾಪವನ್ನು ನಿರಾಕರಿಸಲು ಸಾಧ್ಯವಾಗಿಲ್ಲ ಎಂದು ಲುವಿಜೋ ಹೇಳಿದ್ದಾನೆ. ಆದರೆ, ನಿರ್ಧಾರವು ಪೋಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರು ಈ ವಿಶೇಷ ಮದುವೆ ಸಮಾರಂಭದಲ್ಲಿ ಗೈರು ಹಾಜರಾಗಿದ್ದಾರೆ.
ಇನ್ನೊಂದನ್ನು ಪಡೆಯಲು ನೀವು ಏನನ್ನಾದರೂ ಕಳೆದುಕೊಳ್ಳಬೇಕು. ಹಾಗಾಗಿ ಇತರರು ಏನು ಯೋಚಿಸಿದರೂ ತ್ರಿವಳಿಗಳನ್ನು ಮದುವೆಯಾಗಲು ತಾನು ಸಂತೋಷಪಡುವುದಾಗಿ ಹೇಳಿದ್ದಾನೆ.
ತ್ರಿವಳಿಗಳಲ್ಲಿ ಇಬ್ಬರು ಸಹೋದರಿಯರನ್ನು ಭೇಟಿಯಾಗುವ ಮೊದಲು ನಟಾಲಿಯಾಳನ್ನು ಲುವಿಜೋ ಪ್ರೀತಿಸುತ್ತಿದ್ದನಂತೆ. ನಟಾಲಿ ತನ್ನ ಅವಳಿ ಸಹೋದರಿಯರಾದ ನಾಡೆಗೆ ಮತ್ತು ನತಾಶಾಗೆ ಅವನನ್ನು ಪರಿಚಯಿಸಿದ ಬಳಿಕ ಇಬ್ಬರೂ ಲುವಿಜೋನನ್ನು ಪ್ರೀತಿಸಲು ಶುರು ಮಾಡಿದ್ದಾರೆ. ಈ ಪ್ರಸ್ತಾಪವನ್ನು ಆತನ ಮುಂದಿಟ್ಟಾಗ ಮೂರ್ಛೆ ಹೋಗಿದ್ದನಂತೆ.
ಮೂವರು ಸಹೋದರಿಯರು ಕೂಡ ಬಾಲ್ಯದಿಂದಲೂ ಎಲ್ಲವನ್ನೂ ಹಂಚಿಕೊಂಡು ಬೆಳೆದಿದ್ದಾರೆ. ಹೀಗಾಗಿ ಗಂಡನನ್ನು ಹಂಚಿಕೊಳ್ಳುವುದು ಅವರಿಗೆ ಕಷ್ಟಕರವಾದ ಆಯ್ಕೆಯಾಗಿರಲಿಲ್ಲವಂತೆ..!