ದೊಡ್ಡ ದೊಡ್ಡ ರಾಜಕೀಯ ನಾಯಕರುಗಳು ಮತದಾನ ನಡೆಯುವ ಮುನ್ನ ಆಂತರಿಕ ಸಮೀಕ್ಷೆ ನಡೆಸಿ ಒಂದೊಮ್ಮೆ ತಮ್ಮ ಮಾಮೂಲಿ ಮತ ಕ್ಷೇತ್ರಗಳಲ್ಲಿ ಜಯ ಸಾಧಿಸುವುದು ಕಷ್ಟ ಎಂಬ ಸಂದರ್ಭದಲ್ಲಿ ಮತ್ತೊಂದು ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದರು. ಕೆಲವೊಮ್ಮೆ ತಮ್ಮ ಸ್ಪರ್ಧೆಯಿಂದ ಪಕ್ಷದ ಇತರೆ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗುತ್ತದೆ ಎಂಬ ಕಾರಣಕ್ಕೂ ಎರಡೆರೆಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರು.
ಈಗ ಈ ಪದ್ಧತಿಗೆ ಕೊನೆ ಹಾಡಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಚುನಾವಣೆಗಳಲ್ಲಿ ಒಬ್ಬನೇ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಒಂದೊಮ್ಮೆ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ ಚುನಾವಣೆಗಳಲ್ಲಿ ಅಭ್ಯರ್ಥಿ ಒಂದು ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯಲು ಸಾಧ್ಯವಾಗುತ್ತದೆ.
ಈ ಹಿಂದೆ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕಿಳಿದ ಅಭ್ಯರ್ಥಿ ಒಂದೊಮ್ಮೆ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮತ್ತೊಂದು ಕ್ಷೇತ್ರದ ಪ್ರತಿನಿಧಿಯಾಗಿ ಮುಂದುವರೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಖಾಲಿ ಉಳಿದ ಮತಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಾಗಿತ್ತು. ಇದರಿಂದಾಗಿ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿತ್ತು. ಇದೀಗ ಇದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗ ಮುಂದಾಗಿದೆ. 1996 ಕ್ಕೂ ಮುನ್ನ ಒಬ್ಬ ಅಭ್ಯರ್ಥಿ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದಾಗಿತ್ತಾದರೂ ಬಳಿಕ ಎರಡು ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿತ್ತು.